ಭಾರತದ ತೈಲ ಸ್ಥಾವರಗಳ ಮೇಲೆ ಪಾಕ್ ಗೂಢಚಾರರ ಕಣ್ಣು
ಹೊಸದಿಲ್ಲಿ, ಅ.18: ಭಾರತದ ತೈಲ ಸ್ಥಾವರಗಳ ಮೇಲೀಗ ಪಾಕಿಸ್ತಾನದ ರಾವುಗಣ್ಣು ಬಿದ್ದಿದೆ. ಗುಪ್ತಚರ ಬ್ಯೂರೊ ನಡೆಸಿದ ದೂರವಾಣಿ ಅಡ್ಡ ಹಾಯ್ಕೆಯಲ್ಲಿ ಇದು ಗೊತ್ತಾಗಿದೆ. ತೈಲೋದ್ಯಮದ ಕಾರ್ಯವಾಹಿಯೊಬ್ಬನಿಂದ ಪಾಕಿಸ್ತಾನದ ಗೂಢಚಾರನೊಬ್ಬನು ಮಾಹಿತಿಯನ್ನು ಪಡೆಯುತ್ತಿದ್ದುದು ಅದರಿಂದ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಶಕ್ತಿ ಸ್ಥಾವರಗಳಲ್ಲಿ ಸುರಕ್ಷೆ ಹಾಗೂ ಮಾಹಿತಿ ಸೋರಿಕೆ ತಡೆಗೆ ಕ್ರಮ ಕೈಗೊಳ್ಳುವಂತೆ ತೈಲ ಸಚಿವಾಲಯಕ್ಕೆ ಗುಪ್ತಚರ ಬ್ಯೂರೊ ಸಲಹೆ ನೀಡಿದೆ.
ಸೆ.18ರ ಉರಿ ಭಯೋತ್ಪಾದಕ ದಾಳಿ ಹಾಗೂ ಆ ಬಳಿಕ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ದಾಳಿಯ ಬಳಿಕ, ಗಡಿಯ ಎರಡೂ ಕಡೆಗಳಲ್ಲಿ ಸಂಘರ್ಷ ಹೆಚ್ಚಾಗುವ ಭಯವಿತ್ತು. ಆ ಕಾರಣದಿಂದ ರಕ್ಷಣಾ ಪಡೆಗಳು ಹಾಗೂ ಗುಪ್ತಚರ ಸಂಸ್ಥೆಗಳು ಭಾರೀ ಎಚ್ಚರಿಕೆಯಿಂದಿವೆ.
ಗುಪ್ತಚರ ಬ್ಯೂರೊ ಇತ್ತೀಚೆಗೆ ಅಡ್ಡ ಹಾಯ್ದ ದೂರವಾಣಿ ಸಂಭಾಷಣೆಯೊಂದರಲ್ಲಿ ಪಾಕಿಸ್ತಾನದ ಗೂಢಚರನೊಬ್ಬ ತಾನು ‘ರಾ’ ಅಧಿಕಾರಿಯೆಂದು ಹೇಳಿಕೊಂಡು, ರಾಜಸ್ಥಾನದ ಸೂಕ್ಷ್ಮ ಹೈಡ್ರೊಕಾರ್ಬನ್ ಕೊಳವೆ ಮಾರ್ಗವೊಂದರ ಮೇಲ್ವಿಚಾರಣೆ ನೋಡುತ್ತಿರುವ ಕಾರ್ಯವಾಹಿಯೊಬ್ಬನೊಡನೆ ಮಾತನಾಡುತ್ತಿದ್ದುದು ತಿಳಿದು ಬಂದಿತ್ತು. ಆತ ಆ ಸ್ಥಾವರದ ಸೂಕ್ಷ್ಮ ವಿವರಗಳನ್ನು ಅಧಿಕಾರಿಯಿಂದ ಪಡೆಯಲು ಪ್ರಯತ್ನಿಸುತ್ತಿದ್ದನೆಂದು ಈ ಬಗ್ಗೆ ನೇರವಾಗಿ ಅರಿವಿರುವ ಮೂಲಗಳು ತಿಳಿಸಿವೆ.
ಅನೇಕ ಪಾಕಿಸ್ತಾನಿ ಗೂಢಚಾರರು ಗಡಿಯಾಚೆಯಿಂದ ಹಾಗೂ ಭಾರತದೊಳಗಿಂದ ಸುಳ್ಳು ಹೆಸರುಗಳಲ್ಲಿ ತೈಲ ಸ್ಥಾವರಗಳ ಕಾರ್ಯವಾಹಿಗಳಿಗೆ ಕರೆ ಮಾಡಿ, ಮಾಹಿತಿ ಸಂಗ್ರಹಿಸುತ್ತಿದ್ದಾರೆಂದು ಗುಪ್ತಚರ ಬ್ಯೂರೊ ಎಚ್ಚರಿಕೆ ನೀಡಿತ್ತು. ಪ್ರಮುಖ ಮಾಹಿತಿಯನ್ನು ಯಾರಲ್ಲೂ ಹಂಚಿಕೊಳ್ಳದಂತೆ ತೈಲ ಕೈಗಾರಿಕೆಗಳ ಕಾರ್ಯವಾಹಿಗಳಿಗೆ ಎಚ್ಚರಿಕೆ ನೀಡುವಂತೆ ಅದು ಸಲಹೆ ನೀಡಿತ್ತೆಂದು ಅವು ಹೇಳಿವೆ.
ಗೃಹ ಸಚಿವಾಲಯವು ಆಂತರಿಕ ಭದ್ರತೆಯ ವಿಷಯವನ್ನು ನಿಭಾಯಿಸುತ್ತಿದ್ದು, ಅದು ಸೂಕ್ತ ಕ್ರಮ ಕೈಗೊಳ್ಳಲಿದೆಯೆಂದು ತೈಲ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ಉತ್ತರ ಭಾರತದ ತೈಲ ಸಂಸ್ಕರಣಾಗಾರಗಳಲ್ಲಿರುವ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆಯೆಂದು ಭಾರತೀಯ ತೈಲ ನಿಗಮದ ವಕ್ತಾರರು ಹೇಳಿದ್ದಾರೆ.





