ಸರ್ಜಿಕಲ್ ದಾಳಿಯ ಬೆನ್ನಿಗೆ ಪಾರಿಕ್ಕರ್‌ಗೆ ಕಿರಿಯ ತಂತ್ರಜ್ಞನೊಬ್ಬನ ವರ್ಗಾವಣೆ ಕಿರಿಕಿರಿ
ಹೊಸದಿಲ್ಲಿ, ಅ.18: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿದ 2 ದಿನಗಳಲ್ಲೇ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಕಾರ್ಯಬಾಹುಳ್ಯದ ನಡುವೆಯೇ ಕಿರಿಯ ತಂತ್ರಜ್ಞನೊಬ್ಬನ ವರ್ಗಾವಣೆ ಪ್ರಕರಣವೊಂದನ್ನು ಇತ್ಯರ್ಥಪಡಿಸಲು ಸಮಯ ಮಾಡಿಕೊಳ್ಳಬೇಕಾದ ಪ್ರಸಂಗ ಬಂದಿತ್ತು. ಸುದೀರ್ಘ ಕಾಲದ ದಾಂಪತ್ಯ ವಿವಾದದಂತೆ ತೋರುವ ಈ ಪ್ರಕರಣದಲ್ಲಿ ಇಬ್ಬರು ಬಿಜೆಪಿ ನಾಯಕರು ಬೇರೆ ಬೇರೆ ಕಡೆಗಳನ್ನು ಬೆಂಬಲಿಸಿದ್ದುದು ಇದಕ್ಕೆ ಕಾರಣವಾಗಿತ್ತು.
ಸುಬೋಧ್ ಕುಮಾರ್ ಎಂಬ ಕಿರಿಯ ತಂತ್ರಜ್ಞ ಜಾಲಿಗ್ರಾಂಟ್ ವಿಮಾನ ನಿಲ್ದಾಣದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಆರ್‌ಡಿಒ) ಕೆಲಸ ಮಾಡುತ್ತಿದ್ದಾರೆ. ಅವರನ್ನು ಅ.1ರಂದು ಡೆಹ್ರಾಡೂನ್‌ನಲ್ಲಿ ಭೇಟಿಯಾಗಿದ್ದ ಪಾರಿಕ್ಕರ್, ವರ್ಗಾವಣೆಯನ್ನು ಒಪ್ಪಿಕೊಳ್ಳುವಂತೆ ಸಲಹೆ ನೀಡಿದ್ದರು.
ಇಬ್ಬರು ಬಿಜೆಪಿ ನಾಯಕರ ನಡುವಿನ ಹಗ್ಗ ಜಗ್ಗಾಟ, ಅವರು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಮಾಡಿತ್ತು.
ಕುಮಾರ್‌ನನ್ನು ಡೆಹ್ರಾಡೂನ್‌ನಿಂದ ಕಾನ್ಪುರಕ್ಕೆ ವರ್ಗಾಯಿಸುವಂತೆ ಒಂದು ಪಕ್ಷ ರಕ್ಷಣಾ ಸಚಿವಾಲಯವನ್ನು ಸಂಪರ್ಕಿಸಿದ್ದರೆ, ಇನ್ನೊಂದು ಪಕ್ಷವು ಅವರ ಹೆತ್ತವರ ಹಾಗೂ ಅಂಗವಿಕಲ ಸೋದರನ ಪರಿಸ್ಥಿತಿಯನ್ನು ಗಮನಿಸಿ ವರ್ಗಾವಣೆ ರದ್ದುಗೊಳಿಸುವಂತೆ ಮನವಿ ಮಾಡಿತ್ತು.
ಸುಬೋಧ್ ಕುಮಾರ್‌ರ ಹೆತ್ತವರ ಬೇಡಿಕೆಯಂತೆ, ವರ್ಗಾವಣೆ ತಡೆಹಿಡಿಯಬೇಕೆಂದು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ರಮೇಶ್ ಪೊಖ್ರಿಯಾಲ್ ‘ನಿಶಾಂಕ್’ ಸೆಪ್ಟಂಬರ್‌ನಲ್ಲಿ ಪಾರಿಕ್ಕರ್‌ಗೆ ಪತ್ರ ಬರೆದಿದ್ದರು. ಇನ್ನೊಂದೆಡೆ ಸಹರಾನ್‌ಪುರದ ಬಿಜೆಪಿ ಸಂಸದ ರಾಘವ್ ಲಖನ್‌ಪಾಲ್ ಕುಮಾರ್‌ರನ್ನು ಬೇರೆಡೆಗೆ ವರ್ಗಾಯಿಸುವಂತೆ ಸಚಿವಾಲಯಕ್ಕೆ ಒತ್ತಡ ಹೇರಿದ್ದರು.
ತನ್ನನ್ನು ವರ್ಗಾಯಿಸುವಂತೆ, ತನ್ನ ಪತ್ನಿಯ ಕುಟುಂಬಕ್ಕೆ ತಿಳಿದಿರುವ ರಾಘವ್ ಲಖನ್‌ಪಾಲ್‌ರ ಒತ್ತಡವಿದೆ. ಆದರೆ, ತನ್ನ ಅಹವಾಲನ್ನು ಕೇಳಲೇ ಇಲ್ಲ. ಶೀಘ್ರವೇ ಹಿಂದೆ ಕರೆಸಿಕೊಳ್ಳುವ ಭರವಸೆಯೊಂದಿಗೆ ಕಾನ್ಪುರದಲ್ಲಿ ಕೆಲಸಕ್ಕೆ ಸೇರುವಂತೆ ತನಗೆ ಸೂಚಿಸಲಾಗಿದೆಯೆಂದು ಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ರಕ್ಷಣಾ ಸಚಿವಾಲಯವಾಗಲಿ ರಾಘವ್ ಲಖನ್‌ಪಾಲ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಈ ಪ್ರಕರಣ ಪಾರಿಕ್ಕರ್‌ಗೆ ಹಗ್ಗದ ಮೇಲಿನ ನಡಿಗೆಯಾಗಿದೆಯೆಂದು ಇಟಿಗೆ ಲಭ್ಯವಾಗಿರುವ ಪತ್ರಗಳು ಹಾಗೂ ಸಭೆಯ ದಾಖಲೆಗಳಿಂದ ತಿಳಿದುಬಂದಿದೆ.
ಕಳೆದೊಂದು ವರ್ಷದಿಂದ ಕುಮಾರ್ ತನಗೆ ಬಯ್ಯುತ್ತಿದ್ದಾರೆ ಹಾಗೂ ತೊಂದರೆ ನೀಡುತ್ತಿದ್ದಾರೆಂದು ಅವರ ಪತ್ನಿ ಸಚಿವಾಲಯಕ್ಕೆ ನೀಡಿರುವ ಅರ್ಜಿಯಲ್ಲಿ ಆರೋಪಿಸಿದ್ದಾರೆ.





