ಇರೋಮ್ ಶರ್ಮಿಳಾರ ನೂತನ ಪಕ್ಷ ಅಸ್ತಿತ್ವಕ್ಕೆ
ಕೊಲ್ಕತ್ತಾ, ಅ.18: ಸಾಮಾಜಿಕ ಕಾರ್ಯಕರ್ತೆ ಇರೋಮ್ ಶರ್ಮಿಳಾ ಅವರು ಹೊಸ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸುವ ಮೂಲಕ ತಮ್ಮ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ. ತಮ್ಮ ಪೀಪಲ್ಸ್ ರಿಸರ್ಜೆನ್ಸ್ ಆ್ಯಂಡ್ ಜಸ್ಟಿಸ್ ಅಲಯೆನ್ಸ್(ಪಿಆರ್‌ಜೆಎ) ಪಕ್ಷ ಮಣಿಪುರದಲ್ಲಿ 2017ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಥೌಬಾಲ್ ಮತ್ತು ಖುರೈ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದೇನೆ ಎಂದು ತಿಳಿಸಿದರು. ಖುರೈ ಅವರ ಸ್ವಕ್ಷೇತ್ರವಾಗಿದ್ದರೆ ಥೌಬಾಲ್ ಕ್ಷೇತ್ರವನ್ನು ಮುಖ್ಯಮಂತ್ರಿ ಓಕ್ರಂ ಇಬೊಬಿ ಸಿಂಗ್ ಪ್ರತಿನಿಧಿಸುತ್ತಿದ್ದಾರೆ. ಪಕ್ಷದಲ್ಲಿ ಹಲವಾರು ಸಾಮಾಜಿಕ ಕಾರ್ಯಕರ್ತರು ಮತ್ತು ಉದ್ಯಮಿಗಳಿದ್ದಾರೆ. ಶಿಕ್ಷಣ ತಜ್ಞ ಎರೆಂಡ್ರೋ ಲಿಚೊಂಬಮ್ ಪಕ್ಷದ ಸಂಚಾಲರಾಗಿದ್ದರೆ, ಶರ್ಮಿಳಾ ಸಹ ಸಂಚಾಲಕರಾಗಿರುತ್ತಾರೆ. 1948ರ ಅಕ್ಟೋಬರ್ 18ರಂದು ಮಣಿಪುರ ವಿಧಾನಸಭೆಯ ಪ್ರಪ್ರಥಮ ಅಧಿವೇಶನ ನಡೆದಿದ್ದು ಅದರ ದಿನಾಚರಣೆಯಂದೇ ಶರ್ಮಿಳಾ ತಮ್ಮ ನೂತನ ಪಕ್ಷದ ಘೋಷಣೆ ಮಾಡಿದ್ದಾರೆ. ಮಣಿಪುರದಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ವಿರೋಧಿಸಿ ಶರ್ಮಿಳಾ ಕಳೆದ 16 ವರ್ಷಗಳಿಂದ ಉಪವಾಸ ನಡೆಸುತ್ತಿದ್ದು ಈ ವರ್ಷದ ಆಗಸ್ಟ್ 9ರಂದು ಉಪವಾಸ ಕೈಬಿಟ್ಟಿದ್ದರು.





