ಪೊಲೀಸ್ ರಕ್ಷಣೆ ಕೋರಿದ ‘ಎ ದಿಲ್ ಹೈ ಮುಷ್ಕಿಲ್’ ಚಿತ್ರ ನಿರ್ಮಾಪಕರು
ಎಂಎನ್‌ಎಸ್ ಬೆದರಿಕೆ ಹಿನ್ನೆಲೆ
ಮುಂಬೈ, ಅ.18: ಶೀಘ್ರವೇ ಬಿಡುಗಡೆ ಯಾಗಲಿರುವ ‘ಎ ದಿಲ್ ಹೈ ಮುಷ್ಕಿಲ್’ ಸಿನೆಮಾ ಪ್ರದರ್ಶಿಸುವ ಚಿತ್ರಮಂದಿರಗಳಿಗೆ ಪೊಲೀಸ್ ರಕ್ಷಣೆ ಒದಗಿಸುವಂತೆ ಕೋರಿ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ತಂಡ, ಚಿತ್ರನಿರ್ಮಾಪಕ ಮುಕೇಶ್ ಭಟ್ ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೋದ ವಿಜಯ್ ಸಿಂಗ್ ಅವರು ಮುಂಬೈ ಪೊಲೀಸ್ ಕಮಿಷನರ್ ದತ್ತಾರಾಯ್ ಪಡಸಲ್ಜಿಕರ್ ಮತು ಜಂಟಿ ಪೊಲೀಸ್ ಕಮಿಷನರ್ (ಕಾನೂನು ಸುವ್ಯವಸ್ಥೆ) ದೆವೇನ್ ಭಾರ್ತಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಕರಣ್ ಜೋಹರ್ ಅವರ ‘ಎ ದಿಲ್ ಹೈ ಮುಷ್ಕಿಲ್’ ಸಿನೆಮಾ ಪ್ರದರ್ಶಿಸುವ ಚಿತ್ರಮಂದಿರಗಳಿಗೆ ಹಾನಿ ಎಸಗಲಾಗುವುದು ಎಂದು ಎಂಎನ್‌ಎಸ್ ಬೆದರಿಕೆ ನೀಡಿರುವ ಹಿನ್ನೆಲೆಯಲ್ಲಿ ಈ ಮನವಿ ಸಲ್ಲಿಸಲಾಗಿದೆ. ಪಾಕ್ ನಟ ಫವಾದ್ ಖಾನ್ ಈ ಸಿನೆಮಾ ದಲ್ಲಿ ನಟಿಸಿರುವ ಕಾರಣ ಚಿತ್ರ ಪ್ರದರ್ಶನಕ್ಕೆ ಎಂಎನ್‌ಎಸ್(ಮಹಾರಾಷ್ಟ್ರ ನವನಿರ್ಮಾಣ ವೇದಿಕೆ) ವಿರೋಧ ವ್ಯಕ್ತಪಡಿಸಿದೆ.
ಮುಕೇಶ್ ಅವರು ಭಾರತೀಯ ಸಿನೆಮಾ ಮತ್ತು ಟಿವಿ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿದ್ದರೆ, ಫಾಕ್ಸ್ ಸ್ಟಾರ್ ಸ್ಟುಡಿಯೋ ಸಿನೆಮಾ ವಿತರಕ ಸಂಸ್ಥೆಯಾಗಿದೆ. ಮುಂಬೈ ಪೊಲೀಸರು ಸಿನೆಮಾ ಟಾಕೀಸುಗಳಿಗೆ ಅಗತ್ಯ ಬಿದ್ದಾಗ ನೆರವು ನೀಡಲು ಸಿದ್ಧರಾಗಿದ್ದಾರೆ ಎಂದು ಉಪ ಪೊಲೀಸ್ ಕಮಿಷನರ್ ಅಶೋಕ್ ದುಢೆ ತಿಳಿಸಿದ್ದಾರೆ. ರಾಜ್ಯದಲ್ಲಿ ಈ ಸಿನೆಮಾ ಪ್ರದರ್ಶನಕ್ಕೆ ನಮ್ಮ ವಿರೋಧವಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನೆಮಾ ಪ್ರದರ್ಶಿಸುವ ದುಸ್ಸಾಹಸಕ್ಕೆ ಇಳಿಯುವವರು, ಮಲ್ಟಿಪ್ಲೆಕ್ಸ್‌ಗಳನ್ನು ದುಬಾರಿ ಗಾಜುಗಳಿಂದ ಅಲಂಕರಿಸಲಾಗುತ್ತದೆ ಎಂಬುದನ್ನು ಮರೆಯಬಾರದು ಎಂದು ಎಂಎನ್‌ಎಸ್ ಮುಖಂಡ ಅಮೆ ಖೋಪ್‌ಕರ್ ಹೇಳಿದ್ದಾರೆ. ಈ ಸಿನೆಮಾ ಪ್ರದರ್ಶಿಸುವ ಥಿಯೇಟರ್‌ಗಳ ಗಾಜನ್ನು ಪುಡಿ ಮಾಡಲಾಗುವುದು ಎಂದವರು ತಿಳಿಸಿದ್ದಾರೆ. ಚಿತ್ರ ನಿರ್ಮಾಪಕರು ಚಿತ್ರ ಪ್ರದರ್ಶನಕ್ಕೆ ಪೊಲೀಸರ ಸಹಕಾರ ಪಡೆಯಬಹುದು. ಆದರೆ ಪಾಕ್ ನಟನನ್ನು ಸ್ಕ್ರೀನ್ ಮೇಲೆ ಕಂಡಾಗ ವೀಕ್ಷಕರ ಅಸಮಾಧಾನದ ಪ್ರತಿಕ್ರಿಯೆಯನ್ನು ಎದುರಿಸಲು ಅವರು ಸಿದ್ಧರಿದ್ದಾರೆಯೇ. ಈ ನಿರ್ಮಾಪರಿಗೆ ಅದೇಕೆ ಸಮಾಜದ ಭಾವನೆಗಳು ಅರ್ಥವಾಗ್ತಾ ಇಲ್ಲ ಎಂದು ನನಗೆ ತಿಳಿಯುತ್ತಿಲ್ಲ ಎಂದು ಮಹಾರಾಷ್ಟ್ರ ನವನಿರ್ಮಾಣ್ ಚಿತ್ರಪಠ ಕರ್ಮಾಚಾರಿ ಸೇನಾದ ಕಾರ್ಯನಿರ್ವಾಹಕ ಅಧ್ಯಕ್ಷೆ ಶಾಲಿನಿ ಥ್ಯಾಕರೆ ಹೇಳಿದ್ದಾರೆ.
ಕೆಲವೊಮ್ಮೆ ನನ್ನ ಮತ್ತು ಎಂಎನ್‌ಎಸ್ ಮಧ್ಯೆ ಅಭಿಪ್ರಾಯ ಹುಟ್ಟಿಕೊಳ್ಳುತ್ತದೆ. ಅದಾಗ್ಯೂ ನಾವು ಸಹೋದರಂತೆಯೇ ಇದ್ದೇವೆ. ಶಾಂತಿಗೆ ಆದ್ಯತೆ ನೀಡುವಂತೆ ನನ್ನ ಸೋದರರಿಗೆ ಭಿನ್ನಹ ಮಾಡಿಕೊಳ್ಳುತ್ತೇನೆ ಎಂದು ಮುಕೇಶ್ ಭಟ್ ಹೇಳಿದ್ದಾರೆ.
‘ಎ ದಿಲ್ ಹೈ ಮುಷ್ಕಿಲ್’ ಚಿತ್ರದಲ್ಲಿ ರಣ್‌ಬೀರ್ ಕಪೂರ್, ಐಶ್ವರ್ಯ ರೈ ಬಚ್ಚನ್ ಮತ್ತು ಅನುಷ್ಕಾ ಶರ್ಮ ಪ್ರಧಾನ ಭೂಮಿಕೆಯಲ್ಲಿದ್ದರೆ, ಫವಾದ್ ಖಾನ್ ಅವರ ಪಾತ್ರದ ಬಗ್ಗೆ ವಿವಾದವಿದೆ. ಈ ಮಧ್ಯೆ ಪಾಕ್ ನಟರ ಮೇಲಿನ ನಿಷೇಧ ಪ್ರಕರಣದಲ್ಲಿ ಪ್ರಧಾನಿ ಮೋದಿಯರ ಹೆಸರನ್ನು ಎಳೆದು ತರುವ ರೀತಿಯಲ್ಲಿ ಟ್ವೀಟರ್‌ನಲ್ಲಿ ಹೇಳಿಕೆ ನೀಡಿರುವ ಚಿತ್ರನಿರ್ಮಾಪಕ ಅನುರಾಗ್ ಕಶ್ಯಪ್ ಅವರ ಹೇಳಿಕೆಯನ್ನು ಖಂಡಿಸಿ ಕಲ್ಯಾಣ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಕಶ್ಯಪ್ ವಿರುದ್ಧ ಘೋಷಣೆ ಕೂಗಿ ಅವರ ಭಾವಚಿತ್ರಕ್ಕೆ ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದರು.







