ನಮ್ಮ ಬದುಕಿಗೆ ನಾವೇ ಶಿಲ್ಪಿಗಳು: ನಿಶಾ ಜೇಮ್ಸ್
ವಿದ್ಯಾರ್ಥಿ ವೇದಿಕೆ
.jpg)
ಸಾಗರ, ಅ.18: ನಮ್ಮ ಬದುಕಿಗೆ ನಾವೇ ಶಿಲ್ಪಿಗಳು. ಯಾರೋ ಹೇಳುತ್ತಾರೆ ಎಂದು ಪದೇಪದೇ ಮನಸ್ಸನ್ನು ಬದಲಾಯಿಸಿಕೊಂಡು, ವಿದ್ಯಾರ್ಥಿ ಜೀವನದಲ್ಲಿ ಸಿಗುವ ಆಯ್ಕೆಯ ಅವಕಾಶಗಳನ್ನು ಕಳೆದುಕೊಳ್ಳಬೇಡಿ ಎಂದು ಎ.ಎಸ್ಪಿ ನಿಶಾ ಜೇಮ್ಸ್ ತಿಳಿಸಿದರು.
ಇಲ್ಲಿನ ಎಲ್.ಬಿ. ಕಾಲೇಜಿನ ದೇವರಾಜ ಅರಸು ಕಲಾಕ್ಷೇತ್ರದಲ್ಲಿ ಮಂಗಳವಾರ ವಿದ್ಯಾರ್ಥಿ ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸೀಮಿತ ಆಯಾಮದಲ್ಲಿ ಯೋಚಿಸುವುದರಿಂದ ಪೂರ್ಣ ಪ್ರಮಾಣದ ಯಶಸ್ಸು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿ ದೆಸೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ಮೂಡಿಸಿಕೊಳ್ಳಬೇಕು. ನಿಮ್ಮ ಆಶಯಕ್ಕೆ ತಕ್ಕಂತೆ ಮಕ್ಕಳು ಬದುಕು ರೂಪಿಸಿಕೊಳ್ಳಬೇಕು ಎಂಬ ಒತ್ತಡವನ್ನು ಪೋಷಕರು ಹಾಕಬಾರದು. ಇದರಿಂದ ಮಕ್ಕಳ ಮನಸು ವಿಚಲಿತಗೊಳ್ಳುವ ಸಾಧ್ಯತೆ ಇರುತ್ತದೆ ಎಂದರು. ಡಾಕ್ಟರ್, ಇಂಜಿನಿಯರ್, ಐಟಿಬಿಟಿಯಂತಹ ಉದ್ಯೋಗಿಗಳು ಮಾತ್ರ ಜಗತ್ತು ನಿರ್ಮಾಣ ಮಾಡುತ್ತಾರೆ ಎನ್ನುವ ಭ್ರಮೆಯಿಂದ ವಿದ್ಯಾರ್ಥಿಗಳು ಹೊರಗೆಬನ್ನಿ. ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರ ಸಹಭಾಗಿತ್ವ ಸಹ ಇರುತ್ತದೆ. ಯುಪಿಎಸ್ಸಿಯಂತಹ ಪರೀಕ್ಷೆಯನ್ನು ತೆಗೆದುಕೊಳ್ಳಲು ಸೂರ್ಯನ ಕೆಳಗಿನ ಎಲ್ಲ ಸಂಗತಿಗಳಲ್ಲೂ ಆಸಕ್ತಿ ಬೆಳೆಸಿಕೊಂಡು, ಪೂರಕ ಸಾಮಾನ್ಯಜ್ಞಾನವನ್ನು ಹೊಂದಿರಬೇಕಾಗುತ್ತದೆ ಎಂದರು. ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀಪಾದ ಹೆಗಡೆ ನಿಸ್ರಾಣಿ ಮಾತನಾಡಿ, ವಿದ್ಯಾರ್ಥಿ ವೇದಿಕೆ ರಾಜಕಾರಣಕ್ಕೆ ಮಾತ್ರ ಸೀಮಿತವಾಗಬಾರದು. ವಿದ್ಯಾರ್ಥಿ ಪ್ರತಿನಿಧಿಗಳು ತಾವು ಪ್ರತಿನಿಧಿಸುವ ಶಿಕ್ಷಣ ಸಂಸ್ಥೆಗಳು ಯಶಸ್ಸುಗೊಳ್ಳುವ ನಿಟ್ಟಿನಲ್ಲೂ ಶ್ರಮಿಸಬೇಕು. ಹಿಂದೆ ವಿದ್ಯಾಭ್ಯಾಸ ಇಲ್ಲದಿದ್ದರೂ, ಜೀವನ ನಿರ್ವಹಣೆ ಕಷ್ಟವಾಗುತ್ತಿರಲಿಲ್ಲ. ಈಗ ವಿದ್ಯೆಯೇ ಅತಿಮುಖ್ಯ. ಪೋಷಕರು ನಿಮ್ಮ ವಿದ್ಯಾಭ್ಯಾಸಕ್ಕೆ ಪಡುತ್ತಿರುವ ಶ್ರಮದ ಬಗ್ಗೆ ಸಹ ನಿಮಗೆ ಕಾಳಜಿ ಇರಲಿ ಎಂದರು. ಪ್ರಾಚಾರ್ಯ ಎಂ.ಜಗದೀಶ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಒಡೆಯರ್, ಸಹ ಕಾರ್ಯದರ್ಶಿ ಜಗದೀಶ್ ಗೌಡ, ವಿದ್ಯಾರ್ಥಿ ಪ್ರತಿನಿಧಿಗಳಾದ ಗುರುಪ್ರಸಾದ್, ಪುಷ್ಪಾ, ಅರುಣಾ, ತಸ್ವೀರ್, ಪೂಜಾ ಉಪಸ್ಥಿತರಿದ್ದರು. ಅಫ್ತಾಬುಲ್ಲಾ ನಿರೂಪಿಸಿದರು.





