ಮಹಿಳೆಯರು ಎಲ್ಲಾ ವಿಧಗಳಲ್ಲಿ ಸಂಘಟಿತರಾಗಬೇಕು: ಗೀತಾ ಜಯಂತ್
ಸನ್ಮಾನ ಸಮಾರಂಭ ಮತ್ತು ಜಿಲ್ಲಾ ಮಹಿಳಾ ಘಟಕದ ಉದ್ಘಾಟನೆ ಸಮಾರಂಭ
.jpg)
ಕಡೂರು, ಅ,18: ಮಹಿಳೆಯರು ಎಲ್ಲ ವಿಧಗಳಲ್ಲಿ ಸಂಘಟಿತರಾಗಬೇಕಿದೆ ಎಂದು ವೀರಶೈವ ಮಹಾಸಭಾದ ಕೇಂದ್ರ ಸಮಿತಿ ಮಹಿಳಾ ಅಧ್ಯಕ್ಷೆ ಶ್ರೀಮತಿ ಗೀತಾ ಜಯಂತ್ ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಸಮಿತಿ ವತಿಯಿಂದ ಪಟ್ಟಣದ ಕೆ. ಹೊಸಳ್ಳಿ ಬಡಾವಣೆಯ ಗಂಗಾಂಬಿಕ ಸಮುದಾಯ ಭವನದಲ್ಲಿ ಸಮಾಜದ ಪ್ರತಿಭಾವಂತ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ನೂತನವಾಗಿ ಚುನಾಯಿತರಾದ ಜಿಪಂ ಹಾಗೂ ತಾಪಂ ನಗರಸಭೆ, ಪುರಸಭೆ ಸದಸ್ಯರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭ ಮತ್ತು ಜಿಲ್ಲಾ ಮಹಿಳಾ ಘಟಕದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವೀರಶೈವ ಧರ್ಮದಲ್ಲಿ ಸಾಮಾಜಿಕ ಚಿಂತನೆಗಳಿವೆ. ಬಸವಣ್ಣನವರ ಕಾಲದಿಂದಲೂ ಮಹಿಳೆಯರಿಗೆ ಯಾವುದೇ ಕಟ್ಟುಪಾಡು ವಿಧಿಸಿಲ್ಲ. ಮಹಿಳೆ ಮನಸ್ಸು ಮಾಡಿದರೆ ಏನನ್ನೂ ಬೇಕಾದರೂ ಸಾಧಿಸಬಹುದಾಗಿದೆ. ಸಮಾಜದ ಶಕ್ತಿಯಾಗಿ ಮಹಿಳೆಯರು ಕೆಲಸ ಮಾಡಬೇಕಿದೆ ಎಂದು ಹೇಳಿದರು. ಸಮಾರಂಭವನ್ನು ಉದ್ಘಾಟಿಸಿದ ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ಮಾತನಾಡಿ, ವೀರಶೈವ ಸಮಾಜವನ್ನು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಬಲಿಷ್ಠಗೊಳಿಸುವ ಕಾರ್ಯವಾಗಬೇಕಿದೆ ಎಂದರು.
ವೀರಶೈವ ಮಹಾಸಭಾ ರಾಜ್ಯ ಕಾರ್ಯದರ್ಶಿ ನಟರಾಜ್ ಸಾಗರನಹಳ್ಳಿ ಮಾತನಾಡಿ, ಸಮಾಜವನ್ನು ಮುನ್ನಡೆಸುವ ಕೆಲಸವನ್ನು ಇಂದಿನ ವಿದ್ಯಾರ್ಥಿಗಳು ಮಾಡಬೇಕಿದೆ ಎಂದರು.
ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ್ ಮಾತನಾಡಿ, ಇತ್ತೀಚೆಗೆ ವಿದ್ಯಾರ್ಥಿಗಳು ದುಶ್ಚಟಗಳಿಗೆ ಆಕರ್ಷಣೆಗೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಭಯ, ಭಕ್ತಿ, ನಯ, ವಿನಯ, ಆಚಾರ, ವಿಚಾರ ತಿಳಿ ಹೇಳಲು ಪೋಷಕರಿಗೆ ಸಮಯ ಇಲ್ಲದಾಗಿದೆ. ಹಣದ ವ್ಯಾಮೋಹಕ್ಕೆ ಒಲವು ತೋರುತ್ತಿದ್ದಾರೆ. ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲ ಪೋಷಕರು ಮಕ್ಕಳನ್ನು ಧಾರ್ಮಿಕದ ಕಡೆಗೆ ಕೊಂಡೊಯ್ಯಬೇಕಿದೆ ಎಂದು ಹೇಳಿದರು. ಸಮಾರಂಭದ ಸಾನಿಧ್ಯವನ್ನು ಬಾಳೆಹೊನ್ನೂರು ಶಾಖಾಮಠದ ಬೀರೂರು ಮಠದ ಶ್ರೀ ರುದ್ರಮುನಿ ಸ್ವಾಮಿಗಳು ವಹಿಸಿದ್ದರು. ಸಮಾರಂಭದಲ್ಲಿ ಎಚ್.ವಿ. ಗಿರೀಶ್, ಮೌನೇಶ್, ತೇಜಸ್ ಕುಮಾರ್, ಜೆ.ಬಿ. ಪವನ್, ಸಿ.ಇ. ಚೇತನ್, ನವೀನ್, ಬೀರೂರು ಮಹೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.







