ಪಕ್ಷ ಬಲವರ್ಧನೆಗೆ ಪ್ರವಾಸ: ದೇವೇಗೌಡ

ಕಡೂರು, ಅ.18: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಎಲ್ಲ 32 ಶಾಸಕರಿಗೆ ಟಿಕೆಟ್ ನೀಡಲಾಗುವುದು. ಪಕ್ಷದಿಂದ ಹೊರಹೋಗಿರುವ 8 ಶಾಸಕರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಲಾಗುವುದಿಲ್ಲ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಅವರು ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ಹೋಗುವ ಮಾರ್ಗ ಮಧ್ಯೆ ಕಡೂರು ಪ್ರವಾಸಿ ಮಂದಿರಕ್ಕೆ ಆಗಮಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಡೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ವೈ.ಎಸ್.ವಿ. ದತ್ತರವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು. ರಾಜ್ಯದ ಎಲ್ಲ ಕಡೆ ಪ್ರವಾಸ ಕೈಗೊಂಡು ಪ್ರಾದೇಶಿಕ ಪಕ್ಷ ಉಳಿಸಲು ಸಂಘಟಿತರಾಗುವುದು. ಇದೇ ನವೆಂಬರ್ ತಿಂಗಳಿನಿಂದ ಜೆಡಿಎಸ್. ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಪಕ್ಷದ ಸಂಘಟನೆಗಾಗಿ ರಾಜ್ಯದ ಪ್ರವಾಸ ಕೈಗೊಳ್ಳಲಿದ್ದಾರೆ ಎಂದರು. ನದಿ ನೀರು ಹಂಚಿಕೆ ವಿಚಾರ ಅಂತಾರಾಜ್ಯ ವಿವಾದಕ್ಕೆ ಸಿಲುಕಿ ಕೋರ್ಟ್ ಮುಂದೆ ಇದೆ. ಆದ್ದರಿಂದ ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ. ಕಡೂರು ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳ್ಳಬೇಕಿದೆ. ರಾಜಕೀಯ ಲಾಭಕ್ಕೆ ಅನೇಕರು ನೀರಾವರಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂಬ ಸುಳ್ಳು ಆಶ್ವಾಸನೆ ನೀಡುತ್ತಾರೆ. ನೀರಿನ ಲಭ್ಯತೆ ಬಗ್ಗೆ ಪರಿಶೀಲನೆ ನಡೆಸದೆ ಈ ರೀತಿಯ ಸುಳ್ಳು ಆಶ್ವಾಸನೆಗಳನ್ನು ನೀಡಿ ಜನರನ್ನು ವಂಚಿಸುವ ಕಾರ್ಯವನ್ನು ತಾವು ಮಾಡಲು ಸಿದ್ಧವಿಲ್ಲವೆಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ವೈ.ಎಸ್.ವಿ. ದತ್ತ, ಜೆಡಿಎಸ್ ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ, ಮುಖಂಡರಾದ ಸೀಗೆಹಡ್ಲು ಹರೀಶ್, ಗಂಗಾಧರ ನಾಯಕ್, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಕಲ್ಲೇಶಪ್ಪ, ಪುರಸಭೆ ಸದಸ್ಯ ಎನ್. ಬಷೀರ್‌ಸಾಬ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.





