ಮರಳು ನೀತಿಯ ಸಭೆಗೆ ಡಿವೆಎಸ್ಪಿ ಗೈರು
ಕಚೇರಿಗೆ ಶಾಸಕರ ಮುತ್ತಿಗೆ

ತೀರ್ಥಹಳ್ಳಿ, ಅ.18: ತಾಲೂಕಿನಲ್ಲಿ ಅಪಾರ ಪ್ರಮಾಣದ ಮರಳಿದ್ದರೂ ಜನಸಾಮಾನ್ಯರಿಗೆ ಮರಳು ಸಿಗದಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕರು, ತಹಶೀಲ್ದಾರ್, ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಗೆ ಡಿವೈಎಸ್ಪಿ ಅನುಪ್ ಶೆಟ್ಟಿಯವರನ್ನು ಆಹ್ವಾನಿಸಿದರೂ ಉಡಾೆಯಿಂದ ಗೈರಾಗಿದ್ದಾರೆ ಎಂದು ಆರೋಪಿಸಿ ಶಾಸಕ ಕಿಮ್ಮನೆ ರತ್ನಾಕರರವರ ನೇತೃತ್ವದಲ್ಲಿ ಮರಳು ಗುತ್ತಿಗೆದಾರರು, ಮುಖಂಡರು ಡಿವೈಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಾಲೂಕಿನಲ್ಲಿ ಕಳೆದ ಒಂದು ತಿಂಗಳಿಂದ ಜನಸಾಮಾನ್ಯರಿಗೆ ಮರಳು ದೊರೆಯುತ್ತಿಲ್ಲ. ಸೂರಿಲ್ಲದ ಬಡವರು, ಕಾರ್ಮಿಕರು ಕೆಲಸವಿಲ್ಲದೆ ಅತಂತ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮರಳು ನೀತಿಯೊಂದಿಗೆ ತಹಶೀಲ್ದಾರ್, ಪಿಡಿಒ ಹಾಗೂ ಪೊಲೀಸ್ ಇಲಾಖೆಯವರ ಸಭೆ ಕರೆಯಲಾಗಿತ್ತು. ಸಭೆಗೆ ಆಹ್ವಾನಿಸಿದರೂ ಡಿವೈಎಸ್ಪಿ ಗೈರಾಗುವ ಮೂಲಕ ಶಾಸಕರನ್ನು ಅಗೌರವದಿಂದ ಕಂಡಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಶಾಸಕ ಕಿಮ್ಮನೆ ರತ್ನಾಕರ, ಕ್ಷೇತ್ರದಲ್ಲಿ ಮರಳಿನ ಸಮಸ್ಯೆ ಮಿತಿಮೀರಿದೆ. ಆದರೆ, ಪೊಲೀಸ್ ಇಲಾಖೆ ಜನಸಾಮಾನ್ಯರಿಗೆ ಹಾಗೂ ಬಡವರಿಗೆ ಮರಳು ನೀಡಲು ಸತಾಯಿಸುತ್ತಿದೆ. ಗುತ್ತಿಗೆದಾರರು ಮರಳು ಸಾಗಾಟಕ್ಕೆ ಅವಕಾಶ ಕೋರಿದರೂ ಡಿವೈಎಸ್ಪಿ ಅವಕಾಶ ನೀಡದೆ ದರ್ಪ ತೋರುತ್ತಿರುವುದು ಖಂಡನೀಯ ಎಂದರು.
ಈ ವೇಳೆ ದೂರವಾಣಿಯಲ್ಲಿ ಡಿಐಜಿ ಹಾಗೂ ಎಸ್ಪಿಯವರನ್ನು ಸಂಪರ್ಕಿಸಿದ ಶಾಸಕರು, ಇಲ್ಲಿನ ಡಿವೈಎಸ್ಪಿಯವರ ವರ್ತನೆ ಜನಸಾಮಾನ್ಯರನ್ನು ಕೆರಳಿಸಿದೆ. ಮರಳು ನೀತಿಯ ಅನುಗುಣವಾಗಿ ಮರಳು ಸಿಗುವಂತೆ ತಮ್ಮ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ತಿಳಿಸಿದರು.
ಈ ಸಂದರ್ಭ ತಾಪಂ ಮಾಜಿ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಜಿಪಂ ಮಾಜಿ ಅಧ್ಯಕ್ಷ ಎಚ್. ಪದ್ಮನಾಭ್, ಮುಖಂಡರಾದ ಶ್ರೀನಾಥ್ ಜೋಯ್ಸ, ಮರಳು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸೊಕಿ್ಕನಿಂದ ವರ್ತಿಸುವುದು ಸರಿಯಲ್ಲ: ಕಿಮ್ಮನೆ ರತಾ್ನಕರ
ಐಪಿಎಸ್ ಅಧಿಕಾರಿ ಎಂಬ ಸೊಕ್ಕಿನಿಂದ ಅಹಂಕಾರದಿಂದ ಡಿವೈಎಸ್ಪಿ ವರ್ತಿಸಬಾರದು. ಎಲ್ಲ ಕಾನೂನುಗಳಲ್ಲಿಯೂ ಮಾನವೀಯತೆಗೆ ಅವಕಾಶವಿದೆ. ಬಡವರ ಮನೆಯ ಶೌಚಾಲಯ ಹಾಗೂ ಆಶ್ರಯ ಮನೆಗಳಿಗೆ ತಕ್ಷಣ ಮರಳು ಸಿಗುವಂತಾಗಬೇಕು. ಕೂಡಲೇ ತಹಶೀಲ್ದಾರ್ ಹಾಗೂ ಪಿಡಿಒಗಳ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು ಎಂದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಅನುಪ್ ಶೆಟ್ಟಿಯವರಿಗೆ ಶಾಸಕ ಕಿಮ್ಮನೆ ರತ್ನಾಕರ ಸ್ಪಷ್ಟಪಡಿಸಿದರು.







