ಚೆಂಡೆವಾದಕ ಶಿವಾನಂದ ಕೋಟರಿಗೆ ಡಾ.ಶಾಂತಾರಾಮ್ ಯಕ್ಷಗಾನ ಪುರಸ್ಕಾರ

ಕುಂದಾಪುರ, ಅ.18: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜು ನ.1ರ ಕನ್ನಡ ರಾಜ್ಯೋತ್ಸವ ದಿನದಂದು ಪ್ರಸ್ತುತ ಪಡಿಸುವ ತಾಳಮದ್ದಲೆಯ ಸಂದರ್ಭದಲ್ಲಿ ನೀಡುವ ‘ಡಾ.ಎಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರ’ಕ್ಕೆ ಈ ಬಾರಿ ಪ್ರಸಿದ್ಧ ಚೆಂಡೆವಾದಕ ಶಿವಾನಂದ ಕೋಟ ಆಯ್ಕೆಯಾಗಿದ್ದಾರೆ.
ಶಿವಾನಂದ ಕೋಟ ತಮ್ಮ 12ನೇ ವರ್ಷದಲ್ಲಿ ಮಕ್ಕಳ ಮೇಳದಲ್ಲಿ ಹಾಸ್ಯ ಪಾತ್ರಧಾರಿಯಾಗಿ ಬಹುಮಾನ ಗಿಟ್ಟಿಸಿಕೊಂಡವರು. ನಂತರ ದಿ.ನಾರಣಪ್ಪ ಉಪ್ಪೂರು ಹಾಗೂ ಪಿ.ಶ್ರೀಧರ ಹಂದೆ ಅವರ ಅಮೃತೇಶ್ವರಿ ಮೇಳದ ಮೂಲಕ ಯಕ್ಷಗಾನ ವೃತ್ತಿಜೀವನ ಆರಂಭಿಸಿದರು. ಕಳೆದ 25 ವರ್ಷಗಳಿಂದ ಶ್ರೀ ಸಾಲಿಗ್ರಾಮ ಮೇಳದಲ್ಲಿ ಪ್ರಧಾನ ಚಂಡೆವಾದಕರಾಗಿ ಸಹಸ್ರಾರು ಶೋತೃಗಳನ್ನು ರಂಜಿಸಿದ್ದಾರೆ. ಶಿವಾನಂದ ಕೋಟ ಬಡಗುತಿಟ್ಟಿನ ಜೊತೆಗೆ ತೆಂಕುತಿಟ್ಟಿನ ಚೆಂಡೆವಾದಕರಾಗಿಯೂ ಸೈ ಎನಿಸಿಕೊಂಡವರು. ತಮ್ಮ ಈ ಸಾಧನೆಗೆ ಗುರುಗಳಾದ ಪ್ರಸಿದ್ಧ ಚೆಂಡೆವಾದಕ ರಾಮಕೃಷ್ಣ ಮಂದಾರ್ತಿ ಹಾಗೂ ಮದ್ದಳೆವಾದಕ ದುರ್ಗಪ್ಪ ಗುಡಿಗಾರ್ ಸಹಕಾರವೇ ಕಾರಣ ಎಂದು ಕೃತಜ್ಞತೆಯಿಂದ ಸ್ಮರಿಸುತ್ತಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ನ.1ರಂದು ಅಪರಾಹ್ನ 2 ಗಂಟೆಗೆ ಕಾಲೇಜಿನ ಆರ್.ಎನ್.ಶೆಟ್ಟಿ ಹಾಲ್‌ನಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.





