ನರಸಿಂಗ್ ಯಾದವ್ ಡೋಪಿಂಗ್ ಹಗರಣ: ಸಿಬಿಐ ತನಿಖೆ ಆರಂಭ

ಹೊಸದಿಲ್ಲಿ, ಅ.18: ಅಂತಾರಾಷ್ಟ್ರೀಯ ಕುಸ್ತಿಪಟು ನರಸಿಂಗ್ ಯಾದವ್ ಭಾಗಿಯಾಗಿರುವ ಡೋಪಿಂಗ್ ಹಗರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆ ಆರಂಭಿಸಿದೆ.
ಯಾದವ್ ಮೂತ್ರ ಮಾದರಿಯಲ್ಲಿ ನಿಷೇಧಿತ ದ್ರವ್ಯಕಂಡು ಬಂದ ಹಿನ್ನೆಲೆಯಲ್ಲಿ ಅಂತಿಮ ಕ್ಷಣದಲ್ಲಿ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸದಂತೆ ತಡೆ ಹಿಡಿಯಲಾಗಿತ್ತು.
ಹರ್ಯಾಣ ಪೊಲೀಸರಿಂದ ಎಫ್‌ಐಆರ್ ದಾಖಲಿಸಲ್ಪಟ್ಟಿರುವ ಡೋಪಿಂಗ್ ಪ್ರಕರಣದ ತನಿಖೆಯನ್ನು ಏಜೆನ್ಸಿ ಆರಂಭಿಸಿದೆ ಎಂದು ಸಿಬಿಐ ಮೂಲಗಳು ಮಂಗಳವಾರ ತಿಳಿಸಿವೆ.
ನಿಯಮದ ಪ್ರಕಾರ ಸಿಬಿಐ ರಾಜ್ಯ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನ್ನು ಮತ್ತೊಮ್ಮೆ ದಾಖಲಿಸಿಕೊಳ್ಳಲಿದೆ. ತನಿಖೆಯ ಬಳಿಕ ಯಾವುದೇ ತೀರ್ಮಾನಕ್ಕೆ ಬರಲು ಸಿಬಿಐ ಸ್ವತಂತ್ರವಾಗಿದೆ. ಐಪಿಸಿ 120-ಬಿ( ಕ್ರಿಮಿನಲ್ ಸಂಚು), 328(ವಿಷ ಪ್ರಾಸನ) ಹಾಗೂ 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ರಿಯೋ ಒಲಿಂಪಿಕ್ಸ್‌ನಲ್ಲಿ ತಾನು ಅನರ್ಹಗೊಳ್ಳುವಂತಾಗಲು ಜಿತೇಶ್ ಎಂಬ ಕುಸ್ತಿಪಟು ನಾನು ಸೇವಿಸುವ ಆಹಾರ ಹಾಗೂ ನೀರಿನಲ್ಲಿ ನಿಷೇಧಿತ ವಸ್ತುವನ್ನು(ನಾರ್ಕೊಟಿಕ್) ಕಲಬೆರಕೆ ಮಾಡಿದ್ದಾನೆ ಎಂದು ಯಾದವ್ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ನಾವು ಅವರ ದೂರಿನ ಪ್ರತಿ ವಶಕ್ಕೆ ಪಡೆದಿದ್ದೇವೆ ಎಂದು ಸಿಬಿಐ ವಕ್ತಾರ ದೇವ್‌ಪ್ರೀತ್ ಸಿಂಗ್ ಹೇಳಿದ್ದಾರೆ.
ಕ್ರೀಡಾ ಪಂಚಾಯತಿ ನ್ಯಾಯಾಲಯ(ಸಿಎಎಸ್) ಒಲಿಂಪಿಕ್ ಗೇಮ್ಸ್‌ನ ವೇಳೆ ಯಾದವ್‌ಗೆ ನಾಲ್ಕು ವರ್ಷಗಳ ಕಾಲ ನಿಷೇಧ ಹೇರಿ ತೀರ್ಪು ನೀಡಿತ್ತು. ಈ ಬೆಳವಣಿಗೆಯ ಬಳಿಕ ಡಬ್ಲು ಎಫ್‌ಐ ಈ ವಿಷಯವನ್ನು ಸಿಬಿಐಗೆ ವಹಿಸಿಕೊಡುವಂತೆ ಒತ್ತಾಯಿಸಿತ್ತು.
ರಿಯೋ ಒಲಿಂಪಿಕ್ಸ್ ಆರಂಭವಾಗಲು 20 ದಿನಗಳು ಬಾಕಿ ಇರುವಾಗ ಕುಸ್ತಿಪಟು ಯಾದವ್ ಉದ್ದೀಪನಾ ದ್ರವ್ಯ ಸೇವನೆ ಪ್ರಕರಣದಲ್ಲಿ ಸಿಲುಕಿದ್ದರು.







