ಗರಿಷ್ಠ ಏಕದಿನ ಆಡಿರುವ ಭಾರತ ನಾಲ್ಕನೆ ಯಶಸ್ವಿ ತಂಡ!
ಹೊಸದಿಲ್ಲಿ, ಅ.18: ಭಾರತ ಧರ್ಮಶಾಲಾದಲ್ಲಿ ಇತ್ತೀಚೆಗೆ ನ್ಯೂಝಿಲೆಂಡ್ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯ ಆಡಿದಾಗ ಒಟ್ಟು 900 ಏಕದಿನ ಪಂದ್ಯಗಳನ್ನು ಆಡಿದ್ದ ಮೊದಲ ತಂಡವೆಂಬ ಕೀರ್ತಿಗೆ ಭಾಜನವಾಗಿತ್ತು.
ಒಟ್ಟು 888 ಪಂದ್ಯಗಳನ್ನು ಆಡಿರುವ ಆಸ್ಟ್ರೇಲಿಯ 2ನೆ ಸ್ಥಾನ ಹಾಗೂ 866 ಪಂದ್ಯಗಳನ್ನಾಡಿರುವ ಪಾಕಿಸ್ತಾನ ಮೂರನೆ ಸ್ಥಾನದಲ್ಲಿದೆ. ಭಾರತ ಈ ತನಕ ಆಡಿರುವ 900 ಏಕದಿನ ಪಂದ್ಯಗಳ ಪೈಕಿ 455 ಪಂದ್ಯಗಳಲ್ಲಿ ಜಯ ಸಾಧಿಸಲಷ್ಟೇ ಶಕ್ತವಾಗಿದೆ.
399 ಪಂದ್ಯಗಳಲ್ಲಿ ಸೋತಿದೆ. ಏಳು ಪಂದ್ಯಗಳಲ್ಲಿ ಟೈ ಸಾಧಿಸಿದರೆ, 39 ಪಂದ್ಯಗಳು ಫಲಿತಾಂಶರಹಿತವಾಗಿವೆ. ಗೆಲುವಿನ ಶೇಕಡಾಂಶದಲ್ಲಿ ಭಾರತ ನಾಲ್ಕನೆ ಸ್ಥಾನದಲ್ಲಿದೆ. ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ ಹಾಗೂ ಪಾಕಿಸ್ತಾನ ಬಳಿಕದ ಸ್ಥಾನದಲ್ಲಿದೆ.
ಒಟ್ಟಾರೆ ಏಕದಿನದಲ್ಲಿ ಭಾರತ ನಾಲ್ಕನೆ ಯಶಸ್ವಿ ತಂಡವಾಗಿದೆ. ದಕ್ಷಿಣ ಆಫ್ರಿಕ ಅತ್ಯಂತ ಯಶಸ್ವಿ ತಂಡವಾಗಿದೆ. ಝಿಂಬಾಬ್ವೆ 474 ಪಂದ್ಯಗಳನ್ನು ಆಡಿದ್ದು, ಕೇವಲ 122 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಗೆಲುವಿನ ಶೇಕಡಾಂಶ 26.83ರಷ್ಟಿದೆ.
ಮತ್ತೊಂದೆಡೆ, ಆಸ್ಟ್ರೇಲಿಯ ತಂಡ 888 ಪಂದ್ಯಗಳ ಪೈಕಿ 547ರಲ್ಲಿ ಜಯ ಗಳಿಸಿದ್ದು, ಗೆಲುವಿನ ಶೇಕಡಾಂಶ 64.22. ದಕ್ಷಿಣ ಆಫ್ರಿಕ ಏಕದಿನದಲ್ಲಿ ಪರಿಣಾಮಕಾರಿ ದಾಖಲೆ ಹೊಂದಿದ್ದು, ಅದು 564 ಪಂದ್ಯಗಳನ್ನು ಆಡಿದ್ದು 348 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆಫ್ರಿಕದ ಗೆಲುವಿನ ಶೇ.64.05.







