ಒಡಿಶಾ: ಇನ್ನೊಂದು ಆಸ್ಪತ್ರೆಯಲ್ಲಿ ಆಗ್ನಿ ಆಕಸ್ಮಿಕ

ಕೇಂದ್ರಪಾರಾ,ಅ.19: ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ 21 ಮೃತಪಟ್ಟ ಘಟನೆ ನಡೆದ ಕೇವಲ ಎರಡು ದಿನಗಳ ಬಳಿಕ ರಾಜ್ಯದ ಕೇಂದ್ರಪಾರಾದ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಬುಧವಾರ ಭಾರೀ ಆಗ್ನಿ ಆಕಸ್ಮಿಕ ಸಂಭವಿಸಿದೆ. ಆದರೆ ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲವೆಂದು ತಿಳಿದುಬಂದಿದೆ. ಆಸ್ಪತ್ರೆಯ ಆವರಣದಲ್ಲಿ ಸ್ಥಾಪಿಸಲಾಗಿದ್ದ 120 ಕೆವಿ ಸಾಮರ್ಥ್ಯದ ಜನರೇಟರ್ ಒಂದನ್ನು ರಿಪೇರಿ ಮಾಡುತ್ತಿದ್ದ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿತೆಂದು ವರದಿಗಳು ತಿಳಿಸಿವೆ. ಈ ಘಟನೆಯಿಂದ ರೋಗಿಗಳು ಹಾಗೂ ಅವರ ಪರಿಚಾರಕರು ಸೇರಿದಂತೆ ಆಸ್ಪತ್ರೆಯಲ್ಲಿದ್ದ ನೂರಾರು ಮಂದಿ ಭಯಭೀತಗೊಂಡು, ದಿಕ್ಕಾಪಾಲಾಗಿ ಓಡತೊಡಗಿದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆದರೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದ ಸಿಬ್ಬಂದಿ, ಅರ್ಧ ತಾಸುಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರೆಂದು, ಮುಖ್ಯ ವೈದ್ಯಕೀಯ ಅಧಿಕಾರಿ ನಿರಂಜನ್ ಸ್ವೆನ್ ತಿಳಿಸಿದ್ದಾರೆ. ಅಗ್ನಿಆಕಸ್ಮಿಕದಲ್ಲಿ ಜನರೇಟರ್ ಸಂಪೂರ್ಣ ಹಾನಿಗೀಡಾಗಿದೆಯೆಂದು ಅವರು ಹೇಳಿದ್ದಾರೆ.





