ಭಾರತ ಬೊಗಳಬಹುದಷ್ಟೆ: ಚೀನಾ ಮಾಧ್ಯಮ
ಚೀನಾ ವಸ್ತುಗಳ ಬಳಕೆಗೆ ಬಿದ್ದೀತೇ ಕಡಿವಾಣ ?

ಬೀಜಿಂಗ್, ಅ. 19: ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ನೀಡಲಾಗುತ್ತಿರುವ ಕರೆಯು ಜನರ ಭಾವನೆಗಳನ್ನು ಕೆರಳಿಸುವ ಪ್ರಯತ್ನವಾಗಿದೆಯೇ ಹೊರತು, ಭಾರತೀಯ ಉತ್ಪನ್ನಗಳು ಚೀನಾದ ಉತ್ಪನ್ನಗಳೊಂದಿಗೆ ಸ್ಪರ್ಧಿಸಲಾರವು ಎಂದು ಚೀನಾದ ಸರಕಾರಿ ಒಡೆತನದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಬುಧವಾರ ಹೇಳಿದೆ.
ಹೊಸದಿಲ್ಲಿ ‘‘ಬೊಗಳಬಹುದಷ್ಟೆ’’, ಉಭಯ ದೇಶಗಳ ನಡುವಿನ ಹೆಚ್ಚುತ್ತಿರುವ ವ್ಯಾಪಾರ ಕೊರತೆಯ ಬಗ್ಗೆ ಅದು ಏನೂ ಮಾಡುತ್ತಿಲ್ಲ ಎಂದು ಪತ್ರಿಕೆಯ ಸಂಪಾದಕೀಯ ಪುಟದ ಲೇಖನವೊಂದು ಹೇಳಿದೆ.
ಪಾಕಿಸ್ತಾನದಲ್ಲಿ ನೆಲೆಸಿರುವ ಭಯೋತ್ಪಾದಕರನ್ನು ಅಂತಾರಾಷ್ಟ್ರೀಯ ಭಯೋತ್ಪಾದಕರು ಎಂಬುದಾಗಿ ಘೋಷಿಸಲು ಭಾರತ ನಡೆಸುತ್ತಿರುವ ಪ್ರಯತ್ನಗಳಿಗೆ ಚೀನಾ ನಿರಂತರವಾಗಿ ಅಡ್ಡಗಾಲು ಹಾಕುತ್ತಿರುವುದು ಹೆಚ್ಚಿನ ಭಾರತೀಯರನ್ನು ಕೆರಳಿಸಿದೆ. ಹಾಗಾಗಿ, ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಲು ಅವರು ಕರೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆ ‘ಮೇಕ್ ಇನ್ ಇಂಡಿಯ’ ‘ಅಪ್ರಾಯೋಗಿಕ’ ಎಂಬುದಾಗಿ ಲೇಖನ ಬಣ್ಣಿಸಿದೆ.
ಭಾರತದಲ್ಲಿ ಹೂಡಿಕೆ ಮಾಡದಂತೆ ಪತ್ರಿಕೆಯು ಚೀನಾದ ಕಂಪೆನಿಗಳಿಗೆ ಎಚ್ಚರಿಕೆ ನೀಡಿದೆ. ಭ್ರಷ್ಟಾಚಾರ ಅಧಿಕವಾಗಿರುವ ಹಾಗೂ ಪರಿಶ್ರಮ ಪಡದ ಕಾರ್ಮಿಕ ವರ್ಗವಿರುವ ದೇಶವೊಂದರಲ್ಲಿ ಹೂಡಿಕೆ ಮಾಡುವುದು ‘ಆತ್ಮಹತ್ಯಾಕಾರಕ’ ಎಂದು ಪತ್ರಿಕೆ ಬಣ್ಣಿಸಿದೆ.
‘‘ಚೀನಾದ ಉತ್ಪನ್ನಗಳನ್ನು ನಿಷೇಧಿಸುವ ಕುರಿತಂತೆ ಇತ್ತೀಚಿನ ದಿನಗಳಲ್ಲಿ ಭಾರತೀಯ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಅದು ಜನರ ಭಾವನೆಗಳನ್ನು ಕೆರಳಿಸುವ ಪ್ರಯತ್ನವಷ್ಟೆ’’ ಎಂದಿದೆ.
‘‘ಭಾರತದ ಉತ್ಪನ್ನಗಳು ವಿವಿಧ ಕಾರಣಗಳಿಗಾಗಿ ಚೀನಾದ ಉತ್ಪನ್ನಗಳೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ’’ ಎಂದು ‘ಗ್ಲೋಬಲ್ ಟೈಮ್ಸ್’ ಬರೆದಿದೆ.
ಭಾರತ ರಸ್ತೆಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಇನ್ನಷ್ಟೇ ನಿರ್ಮಿಸಬೇಕಾಗಿದೆ ಹಾಗೂ ಅಲ್ಲಿ ವಿದ್ಯುತ್ ಮತ್ತು ನೀರಿನ ತೀವ್ರ ಕೊರತೆಯಿದೆ ಎಂದಿದೆ.
ಸರ್ವವ್ಯಾಪಿ ಭ್ರಷ್ಟಾಚಾರ
ಎಲ್ಲಕ್ಕಿಂತಲೂ ಹೆಚ್ಚು, ಭಾರತದಲ್ಲಿ ಭ್ರಷ್ಟಾಚಾರ ಎಲ್ಲೆಲ್ಲೂ ತಾಂಡವವಾಡುತ್ತಿದೆ. ಪ್ರತಿ ಸರಕಾರಿ ಇಲಾಖೆಯಲ್ಲಿ ಮೇಲಿನಿಂದ ತಳದವರೆಗೆ ಭ್ರಷ್ಟಾಚಾರವಿದೆ ಎಂದು ‘ಗ್ಲೋಬಲ್ ಟೈಮ್ಸ್’ ಹೇಳಿದೆ.







