ಚಳಿಗಾಲದ ಆಗಮನ: ಎಂಎಚ್370 ವಿಮಾನದ ಶೋಧ 2 ತಿಂಗಳು ಮುಂದಕ್ಕೆ

ಸಿಡ್ನಿ, ಅ. 19: ನಾಪತ್ತೆಯಾಗಿರುವ ಮಲೇಶ್ಯ ಏರ್‌ಲೈನ್ಸ್‌ನ ಎಂಎಚ್370 ವಿಮಾನದ ಅವಶೇಷಗಳಿಗಾಗಿ ಸಾಗರದಾಳದಲ್ಲಿ ನಡೆಸುತ್ತಿರುವ ಶೋಧ ಕಾರ್ಯಾಚರಣೆಯನ್ನು ಹಿಂದೂ ಮಹಾಸಾಗರದಲ್ಲಿನ ಕೆಟ್ಟ ಹವಾಮಾನದ ಹಿನ್ನೆಲೆಯಲ್ಲಿ ಎರಡು ತಿಂಗಳುಗಳ ಕಾಲ ಮುಂದೂಡಲಾಗುವುದು ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು.
2014 ಮಾರ್ಚ್ 8ರಂದು 239 ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತು ಕೌಲಾಲಂಪುರದಿಂದ ಬೀಜಿಂಗ್‌ಗೆ ಹಾರುತ್ತಿದ್ದ ಬೋಯಿಂಗ್ 777 ವಿಮಾನ ನಿಗೂಢವಾಗಿ ಕಾಣೆಯಾಗಿತ್ತು. ವಿಮಾನದ ಅವಶೇಷಗಳಿಗಾಗಿ ಹಿಂದೂ ಮಹಾಸಾಗರದಲ್ಲಿ ಎರಡೂವರೆ ವರ್ಷಗಳಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
1,20,000 ಚದರ ಕಿಲೋಮೀಟರ್ ವ್ಯಾಪ್ತಿಯ ಸಂಶಯಿತ ಪ್ರದೇಶದಲ್ಲಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ ಈ ವರ್ಷದ ಕೊನೆಯ ವೇಳೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯನ್ನು ಆರಂಭದಲ್ಲಿ ಮಲೇಶ್ಯ, ಆಸ್ಟ್ರೇಲಿಯ ಮತ್ತು ಚೀನಾದ ಅಧಿಕಾರಿಗಳು ಹೊಂದಿದ್ದರು.
‘‘ದಕ್ಷಿಣ ಗೋಳಾರ್ಧದಲ್ಲಿ ಆವರಿಸುತ್ತಿರುವ ಚಳಿಗಾಲದಿಂದಾಗಿ ಸಾಗರದಲ್ಲಿ ಕೆಟ್ಟ ಹವಾಮಾನ ಪರಿಸ್ಥಿತಿ ನೆಲೆಸಿದೆ. ಹಾಗಾಗಿ, ಶೋಧ ಕಾರ್ಯಾಚರಣೆಯು 2017ರ ಜನವರಿ/ಫೆಬ್ರವರಿಯ ಸುಮಾರಿಗೆ ಮುಕ್ತಾಯಗೊಳ್ಳುವುದು’’ ಎಂದು ಈ ದೇಶಗಳು ಹೇಳಿಕೆಯೊಂದರಲ್ಲಿ ತಿಳಿಸಿವೆ.
ಈವರೆಗೆ 1,10,000 ಚದರ ಕಿ.ಮೀ. ಸಾಗರ ಪ್ರದೇಶದಲ್ಲಿ ಶೋಧ ನಡೆಸಲಾಗಿದೆ.







