ಆರ್.ರುದ್ರೇಶ್ ಹತ್ಯೆ ಆರೋಪಿಗಳನ್ನು ವಾರದೊಳಗೆ ಬಂಧಿಸಲು ಆಗ್ರಹಿಸಿ ಬಿಜೆಪಿಯಿಂದ ಧರಣಿ

ಮಂಗಳೂರು, ಅ.19: ಆರೆಸ್ಸೆಸ್ ಕಾರ್ಯಕರ್ತ ಆರ್.ರುದ್ರೇಶ್ ಹತ್ಯೆ ಆರೋಪಿಗಳನ್ನು ಒಂದು ವಾರದೊಳಗೆ ಬಂಧಿಸಬೇಕು. ಇಲ್ಲವಾದಲ್ಲಿ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾದರೆ ಅದಕ್ಕೆ ರಾಜ್ಯ ಸರಕಾರವೇ ನೇರ ಹೊಣೆ ಎಂದು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಎಚ್ಚರಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿ ದ.ಕ. ಜಿಲ್ಲಾ ಘಟಕದ ವತಿಯಿಂದ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಆರೋಪಿಗಳನ್ನು ಶೀಘ್ರ ಬಂಧಿಸದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳ್ಳಲಿದೆ. ಸರಕಾರ ಇದಕ್ಕೆ ಅವಕಾಶ ನೀಡದೆ ತಕ್ಷಣ ಆರೋಪಿಗಳನ್ನು ಬಂಧಿಸುವಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದವರು ಆಗ್ರಹಿಸಿದರು.
ಕರ್ನಾಟಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಂಗಲ್ ರಾಜ್ಯ ಮಾಡಲು ಹೊರಟಿದ್ದಾರೆ. ದೇಶಭಕ್ತರನ್ನು ದಮನಿಸಲಾಗುತ್ತಿದ್ದು, ಗೋ ಹಂತಕರು, ಭಯೋತ್ಪಾದಕರಿಗೆ ರಕ್ಷಣೆ ನೀಡಲಾಗುತ್ತಿದೆ. ಕಾಂಗ್ರೆಸ್ ಸರಕಾರದ ಹಸ್ತಕ್ಷೇಪದಿಂದ ನಿಷ್ಠಾವಂತ ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರು ಆತ್ಮಹತ್ಯೆಗೊಳಗಾಗುತ್ತಿದ್ದಾರೆ. ಇಷ್ಟಾದರೂ ಸರಕಾರ ಎಚ್ಚೆತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ ಮಾತನಾಡಿ, ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಮೇಲೆ ರಾಜ್ಯ ಅರಾಜಕತೆಗೆ ತಲುಪಿದೆ ಎಂದರು.
ಅಹಿತಕರ ಘಟನೆಗಳು ಸಂಭವಿಸಿ ಅಶಾಂತಿ ಹೆಚ್ಚಾದರೆ ಅದಕ್ಕೆ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳೇ ಕಾರಣವಾಗಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಎಚ್ಚರಿಸಿದರು.
ಮಾಜಿ ಸಚಿವ ನಾಗರಾಜ ಶೆಟ್ಟಿ, ರಾಜ್ಯ ಬಿಜೆಪಿ ಸಹ ವಕ್ತಾರೆ ಸುಲೋಚನಾ ಜಿ.ಕೆ.ಭಟ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ದ.ಕ.ಜಿ.ಪಂ ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು, ಬಿಜೆಪಿ ಮುಖಂಡರಾದ ಜಗದೀಶ್ ಅಧಿಕಾರಿ, ರವಿಶಂಕರ ಮಿಜಾರು, ಸತೀಶ್ ಪ್ರಭು, ಡಾ.ವೈ.ಭರತ್ ಶೆಟ್ಟಿ, ಸುದರ್ಶನ ಎಂ., ಬೃಜೇಶ್ ಚೌಟ, ರಾಮ ಅಮೀನ್ ಪಚ್ಚನಾಡಿ, ಹರೀಶ್ ಮೂಡುಶೆಡ್ಡೆ, ಹಿಂಜಾವೇ ಮುಖಂಡ ಸತ್ಯಜಿತ್ ಸುರತ್ಕಲ್ ಮೊದಲಾದವರು ಪಾಲ್ಗೊಂಡಿದ್ದರು.







