ಪಾಕ್ ಪ್ರಧಾನಿಯಾಗುವುದು ನನ್ನ ಕನಸು: ಮಲಾಲಾ

ಶಾರ್ಜಾ, ಅ. 19: ಮುಂದೊಂದು ದಿನ ಪಾಕಿಸ್ತಾನದ ಪ್ರಧಾನಿಯಾಗುವುದು ನನ್ನ ಕನಸಾಗಿದೆ ಎಂದು ಮಕ್ಕಳ ಶಿಕ್ಷಣ ಹಕ್ಕುಗಳ ಕಾರ್ಯಕರ್ತೆ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್‌ಝಾಯಿ ಹೇಳಿದ್ದಾರೆ.
ಶಾರ್ಜಾದಲ್ಲಿ ನಡೆಯುತ್ತಿರುವ ಎರಡು ದಿನಗಳ ‘ಭವಿಷ್ಯದಲ್ಲಿ ಹೂಡಿಕೆ ಮಾಡುವುದು’ ಎಂಬ ವಿಷಯದ ಕುರಿತ ವಿಚಾರಸಂಕಿರಣದಲ್ಲಿ ಭಾಗವಹಿಸುವುದಕ್ಕಾಗಿ ಅವರು ಇಲ್ಲಿಗೆ ಆಗಮಿಸಿದ್ದಾರೆ.
‘‘ನಾನು ನಾಲ್ಕನೆ ತರಗತಿಯಲ್ಲಿದ್ದಾಗ ಮಹಿಳೆಯರನ್ನು ವೈದ್ಯರಾಗಿ, ಶಿಕ್ಷಕಿಯರಾಗಿ ಅಥವಾ ಗೃಹಿಣಿಯರಾಗಿ ಮಾತ್ರ ಕಲ್ಪಿಸಿಕೊಳ್ಳುತ್ತಿದ್ದೆ. ಆದರೆ, ನಾನು ಮಹಿಳಾ ಮಾದರಿ ವ್ಯಕ್ತಿಗಳನ್ನು ನೋಡಿದಾಗ ನನ್ನ ಕಲ್ಪನೆ ವಿಸ್ತರಿಸಿತು. ಬೆನಝೀರ್ ಭುಟ್ಟೊರನ್ನು ನಾನು ಮಹಿಳಾ ನಾಯಕಿಯಾಗಿ ಹಾಗೂ ಪಾಕಿಸ್ತಾನದ ಪ್ರಧಾನಿಯಾಗಿ ನೋಡಿದೆ’’ ಎಂದು ‘ಖಲೀಜ್ ಟೈಮ್ಸ್’ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದರು.
‘‘ನಾನು ಮಹಿಳಾ ಅಥ್ಲೀಟ್‌ಗಳು, ಖಗೋಳಯಾನಿಗಳು, ಕಲಾವಿದರು, ಉದ್ಯಮಿಗಳು ಮತ್ತು ಮಹಿಳೆಯರು ವಹಿಸಿದ ಇನ್ನೂ ಹಲವಾರು ಪ್ರಮುಖ ಪಾತ್ರಗಳ ಬಗ್ಗೆ ಕೇಳಿದೆ. ಆಗ ನನ್ನ ಕನಸು ವೈದ್ಯೆಯಾಗುವ ಬದಲು ಪಾಕಿಸ್ತಾನದ ಪ್ರಧಾನಿಯಾಗುವತ್ತ ಬದಲಾಯಿತು. ದೇಶ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದು ಹಾಗೂ ನನ್ನ ಜನರಿಗೆ ಶಿಕ್ಷಣವನ್ನು ತರುವುದು ಪ್ರಧಾನಿಯಾಗಿ ನನ್ನ ಗುರಿಯಾಗಿದೆ’’ ಎಂದರು.





