ಸುಳ್ಳು ದಾಖಲೆಗಳ ಮೂಲಕ ಭಾರೀ ವಂಚನೆ
.jpg)
ಮಣಿಪಾಲ, ಅ.19: ಮುಂಬಯಿಯಲ್ಲಿ ಈಗಾಗಲೇ ಬ್ಯಾಂಕೊಂದರಲ್ಲಿ ಅಡವಿಟ್ಟು ಸಾಲ ಮರುಪಾವತಿ ಮಾಡದೇ ಬಹಿರಂಗ ಏಲಂಗೆ ಆದೇಶವಾಗಿರುವ ಜಾಗವೊಂದನ್ನು ಮುಂಬಯಿ ಮೂವರು ವ್ಯಕ್ತಿಗಳು ಸುಳ್ಳು ದಸ್ತಾವೇಜು ತಯಾರಿಸಿ ಅದರ ಮೂಲಕ ಮಣಿಪಾಲದ ಮಣಿಪಾಲ ಟೆಕ್ನೋಲೊಜಿಸ್ ಎಂಬ ಸಂಸ್ಥೆಗೆ 95 ಲಕ್ಷ ರೂ.ಗಳಿಗೂ ಅಧಿಕ ಹಣವನ್ನು ವಂಚಿಸಿರುವುದಾಗಿ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಬಯಿ ವಾಶಿನವಿಯ ಮಹಾದೇವಿ ಶಂಕರ ಕೋಳಿ, ರಾಮಚಂದ್ರ ಶಂಕರ ಕೋಳಿ ಹಾಗೂ ರಾಜೇಶ್ ಚೆಡ್ಡ ಎಂಬವರೇ ಮಣಿಪಾಲ ಸಂಸ್ಥೆಗೆ ಪಂಗನಾಮ ಹಾಕಿದ ಆರೋಪಿಗಳಾಗಿದ್ದಾರೆ.
ಇವರು ಈ ಮೊದಲೇ ಮಂಬಯಿಯ ಮರ್ಕೆಂಟೈಲ್ಕೋ ಕೋಆಪರೇಟಿವ್ ಬ್ಯಾಂಕಿಗೆ ಅಡವಿಟ್ಟು ಸಾಲ ಪಡೆದು ಅದನ್ನು ಮರುಪಾವತಿಸದೇ ಬಹಿರಂಗ ಏಲಂಗೆ ಆದೇಶವಾಗಿರುವ ನವಿಮುಂಬೈ ಎಂಐಡಿಸಿ ಎಂಬಲ್ಲಿರುವ ಪ್ಲಾಟ್ ನಂ.ಡಿ-207ನ್ನು ನಕಲಿ ದಾಖಲೆ ತಯಾರಿಸಿ ವಂಚನೆ ಮಾಡುವ ಉದ್ದೇಶದಿಂದಲೇ ಮಣಿಪಾಲದ ಶಿವಳ್ಳಿ ಗ್ರಾಮದಲ್ಲಿರುವ ಮಣಿಪಾಲ ಟೆಕ್ನೋಲೊಜಿ ಸಂಸ್ಥೆಗೆ ಐದು ವರ್ಷ ಅವಧಿಗೆ ‘ಲೀವ್ ಎಂಡ್ ಲೈಸನ್ಸ್ ಅಗ್ರಿಮೆಂಟ್’ ಮೂಲಕ ಮಾಡಿಕೊಟ್ಟು ಮೂವರು ಆಪಾದಿತರು ಬೇರೆ ಬೇರೆ ದಿನಾಂಕಗಳಂದು ಒಟ್ಟು 95,07,919 ರೂ.ಗಳನ್ನು ಪಡೆದು ಮೋಸ ಮಾಡಿರುವುದಾಗಿ ಸಂಸ್ಥೆಯ ಸತೀಶ್ ರಾವ್ ಎಂಬವರು ಮಣಿಪಾಲ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.







