ಅಹಂಕಾರವು ಮನುಷ್ಯನನ್ನು ಅಧೋಗತಿಗೆ ತಳ್ಳುತ್ತದೆ: ಡಾ.ವಿಜಯ ಕುಮಾರ್
ವಾಲ್ಮೀಕಿ ಜನ್ಮದಿನಾಚರಣೆ

ಸೊರಬ, ಅ.19: ವಿದ್ವತ್ತು ಒಂದು ಬಾರಿ ಮನುಷ್ಯನಲ್ಲಿ ಹೊಕ್ಕರೆ ಅದು ಯಾವತ್ತೂ ಹೊರ ಹೋಗುವುದಿಲ್ಲ. ಅಂತಹ ವಿದ್ವತ್ತನ್ನು ಗಳಿಸಬೇಕು ಎಂದು ಶಂಕರ್ ಘಟ್ಟದ ಯುಜಿಸಿ, ಸಂಶೋಧಕ ಡಾ. ಎಚ್. ವಿಜಯ ಕುಮಾರ್ ತಿಳಿಸಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಅಹಂಕಾರ ಮನುಷ್ಯನನ್ನು ಅಧೋಗತಿಗೆ ತಳ್ಳುತ್ತದೆ. ಯುವ ಜನಾಂಗ ದುಶ್ಚಟಗಳಿಂದ ದೂರವಾಗಬೇಕು. ವಿದ್ಯೆ ನಮ್ಮ ಮನಸ್ಸನ್ನು ಯಾವತ್ತೂ ಪ್ರಫುಲ್ಲವಾಗಿಡುತ್ತದೆ. ಶಿಕ್ಷಣ ಮನುಷ್ಯನಿಗೆ ಸಾಮಾಜಿಕವಾಗಿ ದೊಡ್ಡ ಸ್ಥಾನವನ್ನು ಕಲ್ಪಿಸುತ್ತದೆ. ವಿವಿಧತೆಯಲ್ಲಿ ಏಕತೆ, ಅನೇಕ ಸಂಸ್ಕೃತಿಗಳನ್ನು ಹೊಂದಿರುವ ಸಾಮಾಜಿಕ ಸಹ ವಿನ್ಯಾಸಗಳನ್ನು ಏಕತೆಗೆ ಕೊಂಡು ಹೋಗುತ್ತಿರುವ ನಿಟ್ಟಿನಲ್ಲಿ ನಮ್ಮ ಭಾರತ ಶ್ರೇಷ್ಠತೆಯನ್ನು ಹೊಂದಿದೆ. ಪ್ರತಿಯೊಂದು ಜನಾಂಗಕ್ಕೂ ತನ್ನದೇ ಆದ ವಿಶಿಷ್ಟವಾದ, ವಿಭಿನ್ನವಾದ ಅರ್ಥಪೂರ್ಣವಾದ ಸಂಸ್ಕೃತಿ ಮತ್ತು ಸಂಸ್ಕಾರಗಳು ಇದೆ. ಇಂತಹ ಉತ್ತಮ ಸಂಸ್ಕಾರವನ್ನು ಹೊಂದಿರುವ ವಾಲ್ಮೀಕಿ ಜನಾಂಗ ದೇಶದಲ್ಲಿ ಹಲವು ಹೆಸರುಗಳಿಂದ ಕರೆಯಲ್ಪಡುತ್ತಿದೆ. ಯಜುರ್ವೇದ ಕಾಲದಿಂದಲೂ ಬೇಡರು ಅಸ್ತಿತ್ವ ಹೊಂದಿದ್ದರು ಎಂಬುದಕ್ಕೆ ಆಧಾರವಿದ್ದು, ಕರ್ನಾಟಕದಲ್ಲಿ ವಂಶಪಾರಂಪರ್ಯವಾಗಿ ಬದುಕಿ ಬಂದ ಜನಾಂಗವಾಗಿದೆ. ವಿಶಿಷ್ಟವಾದ, ವಿಭಿನ್ನವಾದ ಧಾರ್ಮಿಕ ಆಲೋಚನೆಗಳನ್ನು ವಿಸ್ತರಿಸಲು ಮತ್ತು ಅಧ್ಯಯನಕ್ಕಾಗಿ ಸರಕಾರ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಬೇಕು ಎಂದರು. ಸರಕಾರ ಎಸ್ಟಿ ಜನಾಂಗಕ್ಕೆ ಮೀಸಲಿಟ್ಟ ಮೀಸಲಾತಿಯನ್ನು ಹಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನಮಗೆ ಸಿಗಬೇಕಾದ ಅವಕಾಶಗಳಿಂದ ನಾವು ವಂಚಿತರಾಗುತ್ತಿದ್ದು, ಕೆಲವರು ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿ ವಿಶ್ವವಿದ್ಯಾನಿಲಯದ ಅಧಿಕಾರಿಗಳಾಗಿದ್ದಾರೆ ಎಂದು ಆರೋಪಿಸಿದರು.ಕಾರ್ಯಕ್ರಮವನ್ನು ಶಾಸಕ ಎಸ್.ಮಧುಬಂಗಾರಪ್ಪ ಉದ್ಘಾಟಿಸಿದರು.
ತಾಪಂ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಸದಸ್ಯರಾದ ಲತಾ ಸುರೇಶ್, ಸುನೀಲ್ ಗೌಡ, ನಾಗರಾಜ್, ಗ್ರೇಡ್ 2ತಹಶೀಲ್ದಾರ್ ಅಂಬಾಜಿ, ತಾಪಂ ಇಒ ಇಸ್ಮಾಯೀಲ್, ಕಸಾಪ ಅಧ್ಯಕ್ಷ ಹಾಲೇಶನವುಲೆ, ಪಪಂ ಉಪಾಧ್ಯಕ್ಷೆ ರತ್ನಮ್ಮ, ಸದಸ್ಯ ಮಂಚಿ ಹನುಮಂತಪ್ಪ, ಸಮಾಜ ಕಲ್ಯಾಣ ಇಲಾಖೆಯ ರವಿಕುಮಾರ್, ವಾಲ್ಮೀಕಿ ಸಮಾಜದ ಅಧ್ಯಕ್ಷ ಸಂಜೀವ ತರಕಾರಿ ಮತ್ತಿತರರು ಉಪಸ್ಥಿತರಿದ್ದರು.





