ಬರಗಾಲ ಪ್ರದೇಶ ಘೋಷಣೆ ಅನುಷ್ಠಾನಕ್ಕೆ ಕೇಂದ್ರ, ರಾಜ್ಯ ಸರಕಾರಗಳ ಕರ್ತವ್ಯ ಮಹತ್ವದ್ದು: ಶಾಸಕ ಮಧು ಬಂಗಾರಪ್ಪ
ಪತ್ರಿಕಾಗೋಷ್ಠಿ

ಸೊರಬ, ಅ.19: ಬೇಡಿಕೆಯಂತೆ ರಾಜ್ಯ ಸರಕಾರ ತಾಲೂಕನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡಿದ್ದು, ಇದನ್ನು ಅನುಷ್ಠಾನಗೊಳಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕರ್ತವ್ಯ ಹೆಚ್ಚಿದೆ ಎಂದು ಶಾಸಕ ಮಧು ಬಂಗಾರಪ್ಪಹೇಳಿದರು.
ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಾಲೂಕನ್ನು ಸರಕಾರ ಬರಪೀಡಿತ ಪ್ರದೇಶವೆಂದು ಘೋಷಿಸಿರುವುದು ಸ್ವಾಗತಾರ್ಹ. ಸರಕಾರಗಳು ಯೋಜನೆಗಳ ಘೋಷಣೆ ಮಾಡಿದಾಕ್ಷಣ ಪರಿಪೂರ್ಣವಾದ ಅಭಿವೃದ್ಧಿಯಾಗುವುದಿಲ್ಲ. ಯೋಜನೆಗಳು ಅನುಷ್ಠಾನಗೊಳ್ಳುವುದರ ಜೊತೆಗೆ ಅಧಿಕಾರಿಗಳು ಪ್ರಾಮಾಣಿಕವಾಗಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿದಾಗ ಜನರಿಗೆ ನ್ಯಾಯ ಒದಗಿಸಲು ಸಾಧ್ಯ. ಕಳೆದ ವರ್ಷ ಬರಗಾಲದ ಸಂದರ್ಭದಲ್ಲಿ ಅಧಿಕಾರಿಗಳ ನಿರ್ಲಕ್ಷ ಹಾಗೂ ಬೇಜವಾಬ್ದಾರಿ ವರ್ತನೆಯಿಂದ ರೈತರನ್ನು ವಂಚಿಸಿ ವಿಮಾ ಕಂಪೆನಿಗಳ ಜೊತೆ ಕೈ ಜೊಡಿಸಿ ಸಮರ್ಪಕ ಬೆಳೆ ವಿಮೆ ನೀಡುವಲ್ಲಿ ವಿಫಲರಾಗಿದ್ದ ಅಧಿಕಾರಿಗಳ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯ ಮಂತ್ರಿಯವರಿಗೆ ಮನವಿ ಮಾಡಿಕೊಂಡಿದ್ದೇನೆ.
ಕಳೆದ ವರ್ಷ ಬರಗಾಲದ ಸಂದರ್ಭದಲ್ಲಿ ತಾಲೂಕಿ ನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಉಲ್ಬಣ ವಾಗದಂತೆ, ಸರಕಾರದ ಅನುದಾನವನ್ನು ಕಾಯದೆ ಮುಂಗಡವಾಗಿ ಕೊಳವೆ ಬಾವಿಗಳನ್ನು ಕೊರೆಯಿಸಿ ತಾಲೂಕಿನಲ್ಲಿ ನೀರಿನ ಸಮಸ್ಯೆಯನ್ನು ನೀಗಿಸುವಲ್ಲಿ ಯಶಸ್ವಿಯಾಗಿದ್ದೆವು. ಸರಕಾರ ತಕ್ಷಣ ಕಳೆದ ಸಾಲಿನ ಬರ ನಿರ್ವಹಣೆಗೆ ಖರ್ಚು ಮಾಡಿದ ಹಣವನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು. ಪಟ್ಟಣದ ಸರ್ವೇ ನಂ. 113ರಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ 20 ಎಕರೆ ಭೂಮಿಯನ್ನು ಹಲವು ವರ್ಷಗಳ ಹಿಂದೆಯೇ ಸರಕಾರ ಮಂಜೂರಾತಿ ಮಾಡಿ ಆದೇಶ ಹೊರಡಿಸಿತ್ತು. ಆ ಜಾಗದಲ್ಲಿ ಕೆಲವು ರೈತರು ಭೂ ಸಾಗುವಳಿಗೆ ಮುಂದಾಗಿ ಅತಿಕ್ರಮಿಸಿಕೊಂಡಿದ್ದರು. ಅತಿಕ್ರಮಣಕಾರರಿಗೆ ಈ ಹಿಂದೆ ತೆರವುಗೊಳಿಸಿಕೊಳ್ಳುವಂತೆ ರೈತರಿಗೆ ಕಂದಾಯ ಇಲಾಖೆಯಿಂದ ನೋಟಿಸ್ ನೀಡಲಾಗಿತ್ತು. ಕಂದಾಯ ಇಲಾಖೆ ಅಧಿಕಾರಿಗಳು ಸರಕಾರದ ನಿಯಮಾನುಸಾರ ತೆರವುಗೊಳಿಸಿದ್ದಾರೆ. ಇದರಲ್ಲಿ ನಮ್ಮ ಯಾವುದೇ ಹಸ್ತಕ್ಷೇಪವಿಲ್ಲ. ಅಲ್ಲಿರುವ ರೈತರ ಬಗ್ಗೆ ನಮಗೂ ಕಾಳಜಿ ಇದೆ. ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ಅಲ್ಲಿನ ರೈತರಿಗೆ ಅನುಕೂಲ ಮಾಡಿಕೊಡಲು ಚಿಂತಿಸಲಾಗಿದೆ. ಆದರೆ ಕೆರಹಳ್ಳಿ ಗ್ರಾಮದ ರೈತರನ್ನು ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಮಾತನಾಡದ ಸಚಿವ ಹಾಲಪ್ಪ, ಸ.ನಂ 113ರಲ್ಲಿನ ರೈತರ ತೆರವು ಸಂದರ್ಭದಲ್ಲಿ ಪೋಸು ನೀಡಿ ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.ಪಟ್ಟಣದಲ್ಲಿ ಈಗಾಗಲೇ ನಿರ್ಮಾಣ ಗೊಂಡಿರುವ ಸಾಂಸ್ಕೃತಿಕ ಭವನ, ಖಾಸಗಿ ಬಸ್ ನಿಲ್ದಾಣ, ಹೆಚ್ಚುವರಿ ಸರಕಾರಿ ಆಸ್ಪತ್ರೆ ಕಟ್ಟಡಗಳನ್ನು ಸದ್ಯದಲ್ಲಿಯೇ ಸಂಬಂಧಿಸಿದ ಮಂತ್ರಿಗಳನ್ನು ಆಹ್ವಾನಿಸಿ ಉದ್ಘಾಟಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಜೆಡಿಎಸ್ ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ, ತಾಪಂ ಸದಸ್ಯ ಸುನೀಲ್ ಗೌಡ, ಬರಗಿ ನಿಂಗಪ್ಪ ಮತ್ತಿತರರಿದ್ದರು.







