ನೊಬೆಲ್ ಪ್ರಶಸ್ತಿ ಯಾಕೆ ಸಿಕ್ಕಿದೆ ಎಂದು ಗೊತ್ತಿಲ್ಲ: ಒಬಾಮ

ವಾಶಿಂಗ್ಟನ್, ಅ. 19: ತನಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಯಾಕೆ ನೀಡಲಾಯಿತು ಎನ್ನುವುದು ಗೊತ್ತಾಗಿಲ್ಲ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ಅವರಿಗೆ 2009ರಲ್ಲಿ ಪ್ರಶಸ್ತಿ ನೀಡಲಾಗಿತ್ತು.
ಮುಂದಿನ ಜನವರಿಯಲ್ಲಿ ಶ್ವೇತಭವನದಿಂದ ನಿವೃತ್ತರಾಗಲಿರುವ ಒಬಾಮ ಈಗ ಕೆಲಸ ಹುಡುಕುವುದರಲ್ಲಿ ತಲ್ಲೀನರಾಗಿದ್ದಾರೆ. ‘ದ ಲೇಟ್ ಶೋ’ ಎಂಬ ಟಿವಿ ಕಾರ್ಯಕ್ರಮದಲ್ಲಿ ತನ್ನ ಅರ್ಹತೆಗಳ ಬಗ್ಗೆ ಕೇಳಿದ ಕಾರ್ಯಕ್ರಮ ನಿರೂಪಕ ಸ್ಟೀಫನ್ ಕಾಲ್ಬರ್ಟ್‌ರ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು.
ನಿಮಗೆ ಲಭಿಸಿರುವ ಪ್ರಶಸ್ತಿಗಳು ಅಥವಾ ನೀವು ಹೊಂದಿರುವ ಅರ್ಹತೆಗಳ ಬಗ್ಗೆ ತಿಳಿಸಿ ಎಂದು ಕಾಲ್ಬರ್ಟ್ ಕೇಳಿದಾಗ, ‘‘ನಾನು ಸುಮಾರು 30 ಗೌರವ ಪದವಿಗಳನ್ನು ಹೊಂದಿದ್ದೇನೆ ಹಾಗೂ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಕ್ಕಿದೆ’’ ಎಂದು ಒಬಾಮ ಉತ್ತರಿಸಿದರು.
‘‘ನಿಜವಾಗಿಯೂ? ನಿಮಗೆ ನೊಬೆಲ್ ಯಾಕೆ ಸಿಕ್ಕಿದೆ?’’ ಎಂದು ಕಾಲ್ಬರ್ಟ್ ಪ್ರಶ್ನಿಸಿದರು.
‘‘ಪ್ರಾಮಾಣಿಕವಾಗಿ ಹೇಳುವುದಾದರೆ, ನನಗೆ ನೊಬೆಲ್ ಪ್ರಶಸ್ತಿ ಯಾಕೆ ಸಿಕ್ಕಿದೆ ಎಂದು ಈಗಲೂ ಗೊತ್ತಿಲ್ಲ’’ ಎಂದು ಒಬಾಮ ನುಡಿದರು ಎಂದು ‘ಲಾಸ್ ಏಂಜಲಿಸ್ ಟೈಮ್ಸ್’ ವರದಿ ಮಾಡಿದೆ.







