ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೈ ಬಿಡಲು ಆಗ್ರಹ
ಸಾರ್ವಜನಿಕರಿಂದ ಜಿಲ್ಲಾಧಿಕಾರಿಗೆ ಮನವಿ

ಕಾರವಾರ, ಅ.19: ತಾಲೂಕಿನ ಅಮದಳ್ಳಿಯಿಂದ ಪತಂಜಲಿ ಆಸ್ಪತ್ರೆವರೆಗೆ ಬೈಪಾಸ್ ರಸ್ತೆ ಮಾಡಿದರೆ ಕೃಷಿ ಭೂಮಿ ನಷ್ಟವಾಗುತ್ತದೆ. ಅಲ್ಲದೆ, ಅರಣ್ಯ ಪ್ರದೇಶದ ಅಂಚಿನಲ್ಲಿ ಸಾಗುವ ಬೈಪಾಸ್ ರಸ್ತೆಯಿಂದಾಗಿ ಜನರ ಸಂಚಾರಕ್ಕೆ ಸಮಸ್ಯೆಯಾಗಲಿದೆ. ಈ ಕಾರಣದಿಂದ ಚತುಷ್ಪಥ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ತಾಲೂಕಿನ ತೋಡೂರು ಹಾಗೂ ಚೆಂಡಿಯಾ ಭಾಗದ ಸಾರ್ವಜನಿಕರು ಪ್ರತಿಭಟಿಸಿ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಅವರಿಗೆ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಹೆದ್ದಾರಿಯನ್ನು ಬೈಪಾಸ್ ಮೂಲಕ ಮಾಡದೆ ಈಗಿನ ರಾಷ್ಟ್ರೀಯ ಹೆದ್ದಾರಿಯಲ್ಲೇ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ. ರಾಜಕೀಯ ಬೇಡ:
ಹೆದ್ದಾರಿ ಬೈಪಾಸ್ ಮೂಲಕ ಹಾದು ಹೋದರೆ ನೂರಾರು ಎಕರೆ ಕೃಷಿ ಭೂಮಿ ಹಾಳಾಗುತ್ತದೆ. ಅರಣ್ಯದ ಅಂಚಿನಿಂದ ರಸ್ತೆ ಮಾಡಿದಲ್ಲಿ ಜನ ವಸತಿ ಕೇಂದ್ರದಿಂದ ಹೆದ್ದಾರಿ ಸಾಕಷ್ಟು ದೂರವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ 45 ಮೀಟರ್ ಗಡಿ ಗುರುತಿಸಿ, ನೀಲಿನಕ್ಷೆ ತಯಾರಿಸಿದ್ದಾರೆ. ಶಾಸಕ ಸತೀಶ್ ಸೈಲ್ ಅವರು ಅಮದಳ್ಳಿಯಿಂದ ಅರಗಾದ ಪತಂಜಲಿ ಆಸ್ಪತ್ರೆವರೆಗೆ ಬೈಪಾಸ್ ಮಾಡಬೇಕು ಎಂದು ಅಮಾಯಕ ಜನರನ್ನು ಎತ್ತಿಕಟ್ಟಿ ಹೋರಾಟ ನಡೆಸಿದ್ದಾರೆ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಹೋರಾಟದ ಹೆಸರಿನಲ್ಲಿ ನೌಕಾನೆಲೆ ನಿರಾಶ್ರಿತರನ್ನು ಮುಂದೆ ಮಾಡಲಾಗುತ್ತಿದೆ. ಈ ನಿರಾಶ್ರಿತರಿಗೆ ಸರಕಾರದಿಂದ ಕಾಲನಿ ನಿರ್ಮಿಸಿ ಕೊಡಲಾಗಿದ್ದರೂ ಅದರ ಉಪಯೋಗ ಪಡೆಯುತ್ತಿಲ್ಲ. ಅದನ್ನು ಬಿಟ್ಟು ರಸ್ತೆಯ ಪಕ್ಕದಲ್ಲಿ ಮನೆ ನಿರ್ಮಿಸಿದ್ದು ಜನರ ತಪ್ಪಾಗಿದೆ ಎಂದು ಆರೋಪಿಸಲಾಗಿದೆ. ಗ್ರಾಪಂನವರು ಊರ ಜನರ ಅಭಿಪ್ರಾಯ ಪಡೆಯದೆ ಬೈಪಾಸ್‌ನ್ನು ಗುಡ್ಡದ ಅಂಚಿನಿಂದ ಮಾಡಲು ಠರಾವು ನಿರ್ಣಯ ಮಾಡಿ ಕೃಷಿ ಭೂಮಿಯಿಂದ ರಸ್ತೆ ಹಾದು ಹೋಗುವಂತೆ ನಕ್ಷೆ ತಯಾರು ಮಾಡಿದ್ದಾರೆಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಹಿಂದೆ ಹೈದರ್‌ಘಾಟ್ ಮೂಲಕ ಶಿರವಾಡಾಕ್ಕೆ ಬೈಪಾಸ್ ಮೂಲಕ ಹೆದ್ದಾರಿ ಸಂಪರ್ಕಿಸಲು ಹೋರಾಟ ನಡೆಸಲಾಗಿದ್ದರೂ ಹೈಕೋರ್ಟ್ ಬೈಪಾಸ್‌ಗೆ ಅನುಮತಿ ನೀಡಿರಲಿಲ್ಲ. ಅಲ್ಲದೆ, ಶಾಸಕರ ಆಪ್ತ ಹಾಗೂ ಕೆಡಿಎ ಮಾಜಿ ಅಧ್ಯಕ್ಷ ಶಂಭು ಶೆಟ್ಟಿ ಬೈಪಾಸ್ ಮಾರ್ಗಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ತೋಡೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಕರುಣಾ ನಾಯ್ಕ ಅವರ ನೇತೃತ್ವದಲ್ಲಿ ಸದಸ್ಯ ಗಜಾನನ ಬನಾರೆ, ಜನಾರ್ದನ ನಾಯ್ಕ, ಪೂರ್ಣಿಮಾ ಮಾಹೇಕರ, ಮಾನಸಾ ನಾಯ್ಕ, ಸುಶೀಲಾ ಆಗೇರ, ಬಿಜೆಪಿಯ ಮನೋಜ್ ಭಟ್, ಸಂದೇಶ್ ಶೆಟ್ಟಿ, ಗ್ರಾಮಸ್ಥರಾದ ಸುಧಾಕರ ನಾಯ್ಕ ಮತ್ತಿತರರಿದ್ದರು.







