ಮದುವೆ ಮಂಟಪದಲ್ಲಿ ಬಂಧುಗಳಿಗೆ ಸಸಿ ವಿತರಣೆ
ಪರಿಸರ ಪ್ರಜ್ಞೆ ಮೆರೆದ ವಧೂವರರು

ಚಿಕ್ಕಮಗಳೂರು, ಅ.19: ಮದುವೆ ಮಂಟಪದಲ್ಲಿ ಬಂಧುಗಳಿಗೆ ತಾಂಬೂಲದ ಬದಲು ಸಸಿಗಳನ್ನು ನೀಡುವ ಮೂಲಕ ಪರಿಸರ ಪ್ರಜ್ಞೆ ಮೆರೆದ ಅಪರೂಪದ ಘಟನೆ ನಗರದ ಹೊರ ವಲಯದ ಬಂಟರ ಭವನದಲ್ಲಿ ಬುಧವಾರ ನಡೆಯಿತು.
ಮೂಡಿಗೆರೆ ತಾಲೂಕಿನ ಗೌಡಳ್ಳಿಯ ಜಿ.ಎಚ್.ಮನವಿ ಹಾಗೂ ಬೇಲೂರು ತಾಲೂಕು ಕಲ್ಲಳ್ಳಿಯ ಕೆ.ಎಂ.ನಾಗೇಶ್ ದಂಪತಿ ತಮ್ಮ ವಿವಾಹದ ವೇಳೆ ಪರಿಸರ ಕಾಳಜಿ ಮೆರೆಯುವ ಮೂಲಕ ಸಮಾಜಕ್ಕೆ ಮಾದರಿಯಾದರು. ಮೂಲತ:
ಪರಿಸರ ಪ್ರೇಮಿಯಾಗಿರುವ ನಾಗೇಶ್ ತಮ್ಮ ಬಾಳಸಂಗಾತಿಯೊಂದಿಗೆ ಚರ್ಚಿಸಿ ವಿವಾಹದ ವೇಳೆ ಸಸಿಗಳನ್ನು ವಿತರಿಸಿ ಪರಿಸರ ಪ್ರಜ್ಞೆ ಮೂಡಿಸುವ ತಮ್ಮ ಇಂಗಿತವನ್ನು ಆಕೆಗೆ ತಿಳಿಸಿದರು. ವಧುವಿನಿಂದ ಸಹಮತ ದೊರೆತ ಕೂಡಲೇ ಕಾರ್ಯಪ್ರವೃತ್ತರಾದ ನಾಗೇಶ್ ದಾವಣಗೆರೆಯ ತಮ್ಮ ಸ್ನೇಹಿತ ಗಿರೀಶ್ ಅವರ ಎನ್‌ವಿರೋಫ್ರೆಂಡ್ ಸಂಸ್ಥೆಯಿಂದ ಎಂಬತ್ತು ಸಾವಿರಕ್ಕೂ ಅಧಿಕ ವೌಲ್ಯದ ಎರಡು ಸಾವಿರ ಸಸಿಗಳನ್ನು ಖರೀದಿಸಿದರು. ಇಂದು ಮದುವೆ ಮಂಟಪದಲ್ಲಿ ನವದಂಪತಿ ಉಡುಗೊರೆ ನೀಡಲು ಬಂದ ಬಂಧುಗಳಿಗೆ, ಸ್ನೇಹಿತರಿಗೆ ಅಪರೂಪದ ಸಸಿಗಳಾದ ರಕ್ತ ಚಂದನ, ಅಮೃತ ಬಳ್ಳಿ, ಬಿಲ್ವಪತ್ರೆ, ಬನ್ನಿ ಪತ್ರೆ, ಪೇರಲೆ, ಬೇವು, ಕರಿಬೇವು ಸೇರಿದಂತೆ ಆಯುರ್ವೇದ ಮತ್ತು ವಿವಿಧ ಜಾತಿಯ ಹಣ್ಣು, ಹೂವುಗಳ ಸಸಿಗಳನ್ನು ತಾಂಬೂಲದ ಬದಲಿಗೆ ನೀಡುವ ಮೂಲಕ ಪರಿಸರ ಉಳಿಸಿ ಬೆಳೆಸುವಂತೆ ಮನವಿ ಮಾಡಿದರು.
ಇದೇ ವೇಳೆ ಮಾಧ್ಯಮದೊಂದಿಗೆ ವರ ನಾಗೇಶ್ ಮಾತನಾಡಿ, ಮುಂದಿನ ಪೀಳಿಗೆಗೆ ಸುಂದರ ಮತ್ತು ಸ್ವಾಸ್ಥ ಪರಿಸರವನ್ನು ಉಳಿಸುವುದು ಎಲ್ಲರ ಹೊಣೆಂಾಗಿದೆ. ತಮ್ಮ ಮನೆಗಳಲ್ಲಿ ನಡೆಯುವ ಸಮಾರಂಭದ ವೇಳೆ ಸಸಿ ವಿತರಿಸುವುದು ಸೇರಿದಂತೆ ಪರಿಸರ ಪ್ರಜ್ಞೆ ಮೂಡಿಸುವ ಕೆಲಸ ಎಲ್ಲೆಡೆ ಇಂದು ಆಗಬೇಕಾಗಿದೆ ಎಂದರು.





