ಶಿಕ್ಷಕರು ಸಮಾಜದ ರಕ್ಷಕರು: ಯಾಕೂಬ್ ದಾರಿಮಿ
ಮದ್ರಸ ಶಿಕ್ಷಕರ ದಿನಾಚರಣೆ

ಮೂಡಿಗೆರೆ, ಅ.19: ಶಿಕ್ಷಕರು ಸಮಾಜದ ರಕ್ಷಕರು. ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ಧಾರ್ಮಿಕ ಶಿಕ್ಷಕರೇ ನೀಡಿ ಸಮಾಜವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಯಾಕೂಬ್ ದಾರಿಮಿ ಹೇಳಿದರು.
ಅವರು ಹ್ಯಾಂಡ್‌ಪೋಸ್ಟ್‌ನ ಮುಹಿಯುದ್ದೀನ್ ಜುಮಾ ಮಸೀದಿಯ ಸಭಾಂಗಣದಲ್ಲಿ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಸಮಿತಿ ಆಯೋಜಿಸಿದ್ದ ಮದ್ರಸ ಶಿಕ್ಷಕರ ದಿನಾಚರಣೆ (ಮುಅಲ್ಲಿಮ್ ದಿನಾಚರಣೆ)ಯಲ್ಲಿ ಮಾತನಾಡಿದರು. ಜಗತ್ತನ್ನು ಬೆಳಗಲು ಧಾರ್ಮಿಕ ಶಿಕ್ಷಣ ಅತಿ ಅಗತ್ಯವಾಗಿದೆ. ದಿನ ಬೆಳಗಾದರೆ ಅನಾಚಾರ, ಕೊಲೆ, ಸುಲಿಗೆಗಳನ್ನು ಮಾಧ್ಯಮಗಳ ಮೂಲಕ ಕಾಣುತ್ತಿದ್ದೇವೆ. ಗುಣಾತ್ಮಕ ಶಿಕ್ಷಣ ಮಕ್ಕಳಿಗೆ ನೀಡುವ ಮೂಲಕ ಅನಾಚಾರಗಳಿಂದ ದೂರ ಸರಿಸಲು ಶಿಕ್ಷಕರಿಗೆ ಸಾಧ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಹ್ಯಾಂಡ್‌ಪೋಸ್ಟ್ ಜುಮಾ ಮಸೀದಿ ಖತೀಬ್ ಅನ್ವರ್ ಪೈಝಿ ಉದ್ಘಾಟಿಸಿ ಮಾತನಾಡಿ, ಪ್ರವಾದಿ ಮುಹಮ್ಮದ್ ಅವರು ಜಗತ್ತಿಗೆ ಧಾರ್ಮಿಕ, ಸಾಮಾಜಿಕ, ಲೌಕಿಕ, ಶಿಕ್ಷಣದ ಮಾರ್ಗದರ್ಶನ ನೀಡಿದ್ದಾರೆ. ಇಂದಿನ ಮದ್ರಸ ಶಿಕ್ಷಕರು ಪ್ರವಾದಿ ಅವರ ಮಾರ್ಗದರ್ಶನದಂತೆ ಶಿಕ್ಷಣ ನೀಡಬೇಕಾಗಿದೆ. ಆಗ ಮಾತ್ರ ಶಿಕ್ಷಕರಾದವರು ಉತ್ತಮ ಶಿಕ್ಷಕನೆನ್ನಿಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮದ್ರಸ ಮ್ಯಾನೇಜ್‌ಮೆಂಟ್ ಸಮಿತಿ ಅಧ್ಯಕ್ಷ ನಝೀರ್ ಹಾಜಿ ಗಬ್‌ಗಲ್ ವಹಿಸಿದ್ದರು. ಖಲಂದರಿಯ ಅನಾಥಾಶ್ರಮ ಸಂಸ್ಥಾಪಕ ಅಬ್ಬಾಸ್ ಹಾಜಿ ಧಾರ್ಮಿಕ ಧ್ವಜಾರೋಹಣ ನೆರವೇರಿಸಿದರು. ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಸಿರಾಜುದ್ದೀನ್ ಕಿರಾಅತ್ ಪಠಿಸಿದರು. ಖಲಂದರಿಯಾ ಅನಾಥಾಶ್ರಮ ಪ್ರಾಂಶುಪಾಲ ಹಂಝ ಮುಸ್ಲಿಯಾರ್ ದುವಾ ನೆರವೇರಿಸಿದರು. ವೇದಿಕೆಯಲ್ಲಿ ಮುಫತ್ತ್ತಿಸ್ ಅಬ್ದುರ್ರಶೀದ್ ಮುಸ್ಲಿಯಾರ್, ಸಲೀಂ ಫೈಝಿ, ಇಸ್ಮಾಯೀಲ್ ಆಝಾದ್ ಹಾಜಿ, ಹಾಜಬ್ಬಾ, ಸುಲೈಮಾನ್ ಮುಸ್ಲಿಯಾರ್ ಹಾಗೂ ಮಾಜಿ ಅಧ್ಯಕ್ಷರು, ಮದ್ರಸಗಳ ಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು.







