ರಾಜಕೀಯದಲ್ಲಿ ತತ್ವ, ಸಿದ್ಧಾಂತಗಳು ಮರೆಯಾಗುತ್ತಿವೆ: ಬಂಜಗೆರೆ ಜಯಪ್ರಕಾಶ್
‘ಕನ್ನಡ ಕಥಾರಚನಕಮ್ಮಟ’ ಕಾರ್ಯಕ್ರಮ

ಶಿವಮೊಗ್ಗ, ಅ. 19: ಸಾಹಿತಿ ಹಾಗೂ ಯುವ ಜನತೆ ಪ್ರತಿಕ್ರಿಯಿಸದೆ ಇರುವ ಸನ್ನಿವೇಶ ಸೃಷ್ಟಿಯಾದರೆ ಇಡೀ ದೇಶ ಶಾಶ್ವತವಾಗಿ ಅಧೋ ಗತಿಗಿಳಿಯುವುದು ಖಚಿತವಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರೂ ಆದ ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್‌ರವರು ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಸಾಹಿತ್ಯ ವೇದಿಕೆ ಹಾಗೂ ಪುಸ್ತಕ ಪ್ರೇಮಿ ಬಳಗದ ವತಿಯಿಂದ ಆಯೋಜಿಸಲಾಗಿದ್ದ ‘ಕನ್ನಡ ಕಥಾರಚನಕಮ್ಮಟ’ ಕಾರ್ಯಕ್ರಮ ಉದ್ಘಾಟಿಸಿದ ನಂತರ ಸಭಿಕರನ್ನುದ್ದೇಶಿಸಿ ಅವರು ಮಾತನಾಡಿದರು.
ಯುವ ಜನತೆಯು ಪ್ರತಿಕ್ರಿಯಿಸದೆ ಬದುಕಬಾರದು. ಆದರೆ ಈ ಪ್ರತಿಕ್ರಿಯೆಯು ಕೇವಲ ಮೊಬೈಲ್ ಇಟ್ಟುಕೊಳ್ಳುವುದಕ್ಕೆ, ಬಣ್ಣ ಬಣ್ಣದ ಬಟ್ಟೆ ತೊಡುವುದಕ್ಕೆ ಸೀಮಿತವಾಗಬಾರದು. ವ್ಯವಸ್ಥೆಯಲ್ಲಾಗುವ ಸಣ್ಣ ಬದಲಾವಣೆಯತ್ತಲೂ ಗಮನಹರಿಸಬೇಕು. ಅನ್ಯಾಯದ ವಿರುದ್ಧ್ದ ಧ್ವನಿಯೆತ್ತಬೇಕು ಎಂದರು. ಮರೆಯಾಗುತ್ತಿರುವ ವೌಲ್ಯಗಳು: ಜಾಗತೀಕರಣದ ಪರಿಣಾ ಮದಿಂದ ಒಂದೆಡೆ ಇಂಗ್ಲಿಷ್ ಭಾಷೆ ಸಾರ್ವ ಭೌಮತ್ವ ಸಾಧಿಸುತ್ತಿದೆ. ಮಾತೃ ಭಾಷೆಯ ಬಗ್ಗೆಯೇ ಕೀಳರಿಮೆ ಉಂಟು ಮಾಡುತ್ತಿದೆ. ಮತ್ತೊಂದೆಡೆ ಜಾಗತೀಕರಣದಿಂದ ಎಲ್ಲ ಕ್ಷೇತ್ರಗಳಲ್ಲಿಯೂ ಲಾಭ ಕೋರತನ ಹಾಗೂ ವೌಲ್ಯರಾಹಿತ್ಯತೆ ಹೆಚ್ಚಾಗುತ್ತಿದೆ. ಸಮಯಸಾಧಕತನ ಬೆಳೆಯುತ್ತಿದೆ. ಪ್ರಸ್ತುತ ರಾಜಕೀಯ ಕ್ಷೇತ್ರದ
ಲ್ಲಿ ಇದು ತೀವ್ರವಾಗಿ ಕಂಡುಬರುತ್ತಿದೆ ಎಂದರು. ಈ ಹಿಂದೆ ರಾಜಕೀಯ ಕ್ಷೇತ್ರದಲ್ಲಿ ಕಂಡುಬರುತ್ತಿದ್ದ ವೌಲ್ಯ, ತತ್ವ, ಸಿದ್ಧ್ದಾಂತಗಳು ಪ್ರಸ್ತುತ ಮರೆಯಾಗಿವೆ. ಚುನಾವಣೆಯಲ್ಲಿ ಗೆಲ್ಲುವುದೊಂದೇ ಮಂತ್ರವಾಗಿದೆ. ಇದಕ್ಕೆ ಗರಿಗರಿ ನೋಟಿನ ಮೊರೆ ಹೋಗಲಾಗುತ್ತಿದೆ. ಜನರು ಕೂಡ ಉದಾರಿಗಳಾಗುತ್ತಿದ್ದಾರೆ. ಯಾರು ಹೆಚ್ಚು ನೋಟು ಕೊಡುತ್ತಾರೋ ಅವರಿಗೆ ಮತ ಹಾಕುತ್ತಿದ್ದಾರೆ. ಇದು ಕೂಡ ಜಾಗತೀಕರಣದ ಪ್ರತಿಫಲವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ದೇಶವು ಕಪ್ಪುಹಣ ಹಾಗೂ ಭ್ರಷ್ಟಾಚಾರವನ್ನು ಬಹಿ
ರಂಗವಾಗಿ ಒಪ್ಪಿಕೊಂಡಂತೆ ಗೋಚರವಾಗುತ್ತಿದೆ. ಭ್ರಷ್ಟಾಚಾರಿಗಳಲ್ಲಿ ಅಂಜಿಕೆಯ ಮನೋಭಾವವೇ ಇಲ್ಲವಾಗಿದೆ. ಜನರು ಕೂಡ ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರ ಹಾಗೂ ಭ್ರಷ್ಟರನ್ನು ಪ್ರಶ್ನಿಸುವವರ ಸಂಖ್ಯೆಯೆ ಕಡಿಮೆಯಾಗುತ್ತಿದೆ. ಇದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ ಎಂದರು. ಸಾಹಿತ್ಯ ಚಟುವಟಿಕೆ: ವೌಲ್ಯರಾಹಿತ್ಯತೆ ಹೋಗ ಲಾಡಿಸಲು ಹಾಗೂ ಯುವ ಜನತೆಯಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವ ಉದ್ದೇಶದಿಂದ ಪುಸ್ತಕ ಪ್ರಾಧಿಕಾರವು ಕಾಲೇಜುಗಳಲ್ಲಿ ಪುಸ್ತಕ ಪ್ರೇಮಿ ಬಳಗಗಳನ್ನು ರಚಿಸುತ್ತಿದೆ. ಸಾಹಿತ್ಯ ಕೃತಿ ರಚನೆಗೆ ಪ್ರೇರಣೆ ನೀಡುವ ಕೆಲಸ ಮಾಡುತ್ತಿದೆ. ಸಮಾಜವನ್ನು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳಲು ಸಾಹಿತ್ಯದ ಅರಿವು ಹೊಂದುವುದು ಅವಶ್ಯಕವಾಗಿದೆ ಎಂದು ಹೇಳಿದರು. ಸಮಾಂಭದಲ್ಲಿ ಕುವೆಂಪು ವಿ.ವಿ.ಯ ನಿವೃತ್ತ ಪ್ರಾಧ್ಯಾಪಕರಾದ ಡಾ. ಸಣ್ಣರಾಮ, ಐಕ್ಯೂಎಸಿ ಸಂಚಾಲಕ ಡಾ. ಧನಂಜಯ, ಗೀತಾಂಜಲಿ ಪುಸ್ತಕ ಪ್ರಕಾಶನದ ಜಿಬಿಟಿ ಮೋಹನ್‌ಕುಮಾರ್, ಕಾಲೇಜು ಪ್ರಾಂಶುಪಾಲ ಪ್ರೊ.ಎಂ. ಕೆ. ನಾರಾಯಣ ಸ್ವಾಮಿ, ಉಪನ್ಯಾಸಕರಾದ ಡಾ. ಚನ್ನೇಶ್ ಹೊನ್ನಾಳ್ಳಿ, ಸೀಮಾ ಉಪಸ್ಥಿತರಿದ್ದರು.
ಬಾಟಲಿ ನೀರು: ಲೂಟಿ ಹೊಡೆಯುವ ಸರಳ ವಿಧಾನ
ಬಾಟಲಿ ನೀರು ಬಳಸುವ ಮೂಲಕ ವಿದ್ಯಾವಂತರು ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಸಾಂಸ್ಕೃತಿಕವಾಗಿ ಒಪ್ಪಿತವಲ್ಲದ ಬಾಟಲಿ ನೀರಿಗೆ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವ ಅರ್ಹತೆಯಿಲ್ಲವಾಗಿದೆ. ನಮ್ಮ ದೇಶವನ್ನು ಲೂಟಿ ಹೊಡೆಯಲು ಕಂಡುಕೊಂಡ ಸರಳ ವಿಧಾನ ಬಾಟಲಿ ನೀರಾಗಿದೆ. ಇದನ್ನು ನಾವು ಅರ್ಥೈಸಿಕೊಳ್ಳಬೇಕಾಗಿದೆ ಎಂದು ಡಾ. ಬಂಜಗೆರೆ ಜಯಪ್ರಕಾಶ್ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಸೆಮಿನಾರ್‌ಗಳ ಲಾಂಛನವಾಗಿ ಬಾಟಲಿ ನೀರು ಪರಿವರ್ತಿತವಾಗಿದ್ದು, ಆ ಮಟ್ಟಕ್ಕೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಕಳಸ ಇಡುವ ಜಾಗದಲ್ಲಿ ಬಾಟಲಿ ನೀರಿಡಲು ಆಸ್ಪದ ಕೊಡಬಾರದು. ಜನರಲ್ಲಿ ಭಯ ಹುಟ್ಟಿಸಿ ನೀರು ಮಾರಾಟ ನಡೆಸುವ ತಂತ್ರಗಾರಿಕೆ ನಡೆಸಲಾಗುತ್ತಿದೆ. ನಾಗರಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು ಪ್ರತಿಯೊಂದು ಸರಕಾರಗಳ ಗುರುತರ ಜವಾಬ್ದಾರಿಯಾಗಿದೆ ಎಂಬುವುದನ್ನು ಸರಕಾರಗಳು ಅರಿತುಕೊಳ್ಳಬೇಕಾಗಿದೆ ಎಂದರು.







