ಏಕರೂಪ ನಾಗರಿಕ ಸಂಹಿತೆಗೆ ಸಲಫಿ ಮೂವ್‌ಮೆಂಟ್ ವಿರೋಧ
ಮಂಗಳೂರು, ಅ.19: ಕೇಂದ್ರ ಸರಕಾರವು ಜಾರಿಗೆ ತರಲು ಮುಂದಾಗಿರುವ ಏಕರೂಪ ನಾಗರಿಕ ಸಂಹಿತೆಗೆ ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ವಿರೋಧ ವ್ಯಕ್ತಪಡಿಸಿದೆ. ಸಂಘಟನೆಯ ಕೇಂದ್ರೀಯ ಮಂಡಳಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದ್ದು, ಸಂವಿಧಾನ ಬದ್ಧವಾಗಿ ಬದುಕುತ್ತಿರುವ ಮುಸ್ಲಿಮ್‌ರ ಶರಿಅತ್ ನಿಯಮಗಳಲ್ಲಿ ಹಸ್ತಕ್ಷೇಪ ಮಾಡದಂತೆ ಕೇಂದ್ರ ಸರಕಾರವನ್ನು ಆಗ್ರಹಿಸಲಾಗಿದೆ.
ಒಂದು ಬಾರಿಗೆ ಮೂರು ತಲಾಖ್ ಹೇಳಿ ಪತ್ನಿಯನ್ನು ವಿಚ್ಛೇದಿಸುವ ಪದ್ಧತಿ ಕುರ್‌ಆನ್ ಮತ್ತು ಹದೀಸ್‌ಗಳಲ್ಲಿಲ್ಲ. ಪತಿ-ಪತ್ನಿಯರನ್ನು ಒಂದುಗೂಡಿಸುವ ಎಲ್ಲ ಪ್ರಯತ್ನಗಳು ವಿಫಲಗೊಂಡಾಗ ಮತ್ತು ದಾಂಪತ್ಯವನ್ನು ಮುಂದುವರಿಸಲು ಸಾಧ್ಯವಾಗದೆಂಬ ಸ್ಥಿತಿಯಲ್ಲಿ ಮಾತ್ರ ಸದಾಚಾರದಂತೆ ಪತ್ನಿಯನ್ನು ವಿಚ್ಛೇದಿಸಲು ಇಸ್ಲಾಮ್ ಅನುಮತಿಸುತ್ತದೆ.
ತ್ರಿವಳಿ ತಲಾಖ್ ಎಂಬುದು ಧರ್ಮಬಾಹಿರ ಪತ್ನಿ ಪೀಡಕರ ಕೃತ್ಯವಾಗಿದ್ದು, ತ್ರಿವಳಿ ತಲಾಖ್‌ನಿಂದ ಸಂತ್ರಸ್ತರಾಗುವ ಮಹಿಳೆಯರು ಶರೀಅತ್ ಕಾನೂನಿನ ಪ್ರಕಾರ ನ್ಯಾಯ ಕೋರಿ ಕೋರ್ಟ್‌ಗೆ ಹೋಗಬಹುದೇ ವಿನಃ ಅದಕ್ಕಾಗಿ ಪ್ರತ್ಯೇಕ ಕಾನೂನು ರಚಿಸಲು ಕೋರ್ಟ್ ಹಾಗೂ ಸರಕಾರಗಳು ಮುಂದಾಗುವುದು ಶರಿಅತ್‌ನಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





