‘ರಾಜಕೀಯ ಲಾಭಕ್ಕಾಗಿ ‘ತ್ರಿವಳಿ ತಲಾಖ್’ ಬಳಕೆ’

ಬೆಂಗಳೂರು, ಅ.19: ಮುಂಬರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆದುಕೊಳ್ಳುವ ಉದ್ದೇಶದಿಂದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ‘ತ್ರಿವಳಿ ತಲಾಖ್’ ವಿಷಯವನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ.ಇಬ್ರಾಹೀಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರವು ಈ ವಿಷಯವನ್ನು ನ್ಯಾಯಾಲಯದ ಅಂಗಳಕ್ಕೆ ತೆಗೆದುಕೊಂಡು ಹೋಗಿದೆ. ಆದುದರಿಂದ, ನಾವು ಭಾವಾವೇಷಕ್ಕೆ ಒಳಗಾಗದೆ ಕಾನೂನಿನ ಹೋರಾಟದ ಮೂಲಕವೇ ಉತ್ತರ ನೀಡಬೇಕಿದೆ ಎಂದರು.
ಮುಸ್ಲಿಮರಲ್ಲಿರುವ ಎಲ್ಲ ಪಂಗಡಗಳು ಒಗ್ಗಟ್ಟಾಗಿ, ಸುಪ್ರೀಂಕೋರ್ಟ್‌ನಲ್ಲಿ ಈ ವಿಷಯದ ಕುರಿತು ಹೋರಾಟ ನಡೆಸಬೇಕು. ಕೇಂದ್ರ ಕಾನೂನು ಆಯೋಗ ಸಿದ್ಧಪಡಿಸಿರುವಂತಹ ಪ್ರಶ್ನಾವಳಿಗಳನ್ನು ಬಹಿಷ್ಕರಿಸುವ ಬದಲು, ಉತ್ತಮವಾದ ವಕೀಲರನ್ನು ನೇಮಿಸಿ, ಮುಸ್ಲಿಮರಲ್ಲಿನ ವಿವಾಹ ಪದ್ಧತಿ ಹಾಗೂ ವಿಚ್ಛೇಧನ (ತಲಾಖ್)ದ ಕುರಿತು ಮನವರಿಕೆ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು.
ದೇಶದಲ್ಲಿರುವ 120 ಕೋಟಿ ಜನರು ಒಂದೇ ಸಂವಿಧಾನವನ್ನು ಒಪ್ಪಿಕೊಂಡಿದ್ದಾರೆ. ಆದರೆ, ಸಾಮಾಜಿಕ ಜೀವನಕ್ಕಾಗಿ ಮಾತ್ರ ಮುಸ್ಲಿಮರು ಶರೀಅತ್ ಕಾನೂನು ಅನುಸರಿಸುತ್ತಾರೆ. ಅದೇ ರೀತಿಯಲ್ಲಿ ಬೇರೆ ಸಮುದಾಯ ಗಳಲ್ಲಿಯೂ ವೈಯಕ್ತಿಕ ಕಾನೂನುಗಳು ಜಾರಿಯಲ್ಲಿರುವುದನ್ನು ನಾವು ಕಾಣಬಹುದು ಎಂದು ಇಬ್ರಾಹೀಂ ಹೇಳಿದರು.
ಮುಫ್ತಿ ಅಶ್ರ್ ಅಲಿ, ವೌಲಾನ ಶಂಶುಲ್‌ಹಕ್, ವೌಲಾನ ತನ್ವೀರ್‌ಹಾಶ್ಮಿ, ವೌಲಾನ ಶಾಫಿ ಸಅದಿ, ಅಹ್ಲೇ ಹದೀಸ್, ಶಿಯಾ ಪಂಗಡದ ಧಾರ್ಮಿಕ ಮುಖಂಡರ ನಿಯೋಗವು ನವೆಂಬರ್‌ನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಮುಸ್ಲಿಮರಲ್ಲಿರುವ ಆತಂಕ ಹಾಗೂ ಇತರೆ ಸಮುದಾಯಗಳಲ್ಲಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡಬೇಕು ಎಂದು ಅವರು ಮನವಿ ಮಾಡಿದರು.







