ಎಲ್ಲೂರು ಗ್ರಾಮಸಭೆ: ಯುಪಿಸಿಎಲ್ ವಿಸ್ತರಣಾ ಸಾರ್ವಜನಿಕ ಅಹವಾಲು ಸಭೆಗೆ ವಿರೋಧ
ಪಡುಬಿದ್ರೆ, ಅ.20: ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಒಡೆತನದ ಯುಪಿಸಿಎಲ್ ಕಲ್ಲಿದ್ದಲು ಆಧಾರಿತ ಹೆಚ್ಚುವರಿ 1600 ಮೆಗಾವ್ಯಾಟ್ ಉಷ್ಣ ವಿದ್ಯುತ್ ಸ್ಥಾವರದ ವಿಸ್ತರಣಾ ಯೋಜನೆಗೆ ಸಂಬಂಧಿಸಿದಂತೆ ನವೆಂಬರ್ 10ರಂದು ಪಣಿಯೂರಿನಲ್ಲಿ ಕರೆದ ಸಾರ್ವಜನಿಕ ಅಹವಾಲು ಸಭೆಗೆ ಎಲ್ಲೂರು ಗ್ರಾಮ ಪಂಚಾಯತ್ ವಿರೋಧ ವ್ಯಕ್ತಪಡಿಸಿದೆ.
ಪರಿಸರ ಸಾರ್ವಜನಿಕ ಆಲಿಕೆಯ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನವೆಂಬರ್ 10ರಂದು ಪಣಿಯೂರಿನ ದುರ್ಗಾದೇವಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬೆಳಗ್ಗೆ 10:30ಕ್ಕೆ ಸಬೆ ನಡೆಸಲು ತೀರ್ಮಾನಿಸಿದೆ. ಈ ಬಗ್ಗೆ ಈಗಾಗಲೇ ಸಾರ್ವಜನಿಕರಿಗೆ ಪತ್ರಿಕಾ ಪ್ರಕಟನೆ ಮೂಲಕ ತಿಳಿಸಲಾಗಿದೆ. ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿಯವರಿಗೆ ಗುರುವಾರ ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸಲಾಗಿದೆ.
ಸಾರ್ವಜನಿಕ ಅಹವಾಲು ಸಭೆಗೆ ಎಲ್ಲೂರು ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದ್ದು, ಸಭೆ ನಡೆಸುವ ಸ್ಥಳವು ಯುಪಿಸಿಎಲ್ ಸ್ಥಾವರದಿಂದ ಬಾಧಿತವಾದ ಪ್ರದೇಶದಿಂದ ಬಹಳಷ್ಟು ದೂರದಲ್ಲಿದೆ. ಅಲ್ಲದೆ ನಮ್ಮ ಎಲ್ಲೂರು ಗ್ರಾಮದ ಗಡಿಭಾಗದಲ್ಲಿದ್ದು ಅಲ್ಲಿಗೆ ಹೋಗಲು ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲದಿರುವುದು ಹಾಗೂ ಪ್ರಯಾಣದ ಸಮಯವು ಹೆಚ್ಚಾಗಿರುವುದರಿಂದ ಈ ಸಾರ್ವಜನಿಕ ಸಭೆಗೆ ಹಾಜರಾಗಲು ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಎಲ್ಲೂರು ಗ್ರಾಮ ಪಂಚಾಯತ್‌ನ ಹಿಂದುಗಡೆ ಇರುವ ಮೈದಾನದಲ್ಲಿ ಈ ಸಭೆಯನ್ನು ನಡೆಸಿದರೆ ಯೋಜನೆಯಿಂದ ಬಾಧಿತ ಪ್ರದೇಶದ ಜನರಿಗೆ ಸಭೆಯಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು ತುಂಬಾ ಅನುಕೂಲವಾಗುತ್ತದೆ ಎಂಬುದು ಯುಪಿಸಿಎಲ್ ಸಂತ್ರಸ್ತರ ಒಕ್ಕೊರಲ ಆಗ್ರಹ.
ಪಣಿಯೂರು ದುರ್ಗಾದೇವಿ ಹಿ ಪ್ರಾ. ಶಾಲೆ ಮೈದಾನ ಕುಂಜೂರಿನಲ್ಲಿ ನಡೆಸಲು ನಿರ್ಧರಿಸಲಾದ ಸಭೆಯನ್ನು ಅದೇ ದಿನ ಯುಪಿಸಿಎಲ್ ಸಂತ್ರಸ್ತ ಗ್ರಾಮಸ್ಥರ ಬೇಡಿಕೆಯಂತೆ ಎಲ್ಲೂರು ಗ್ರಾಮ ಪಂಚಾಯತ್ ಕಚೇರಿಯ ಹಿಂಬದಿಯ ಮೈದಾನದಲ್ಲಿ ನಡೆಸಿ ಸಂತ್ರಸ್ತ ಗ್ರಾಮಸ್ಥರಿಗೆ ನ್ಯಾಯ ಒದಗಿಸುವಂತೆ ತಾವು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಆದೇಶಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಎಲ್ಲೂರು ಗ್ರಾಮ ಪಂಚಾಯತ್ ಮನವಿ ಮಾಡಿದೆ.
ಈ ವೇಳೆ ಗ್ರಾಪಂ ಉಪಾಧ್ಯಕ್ಷ ಜಯಂತ್ ಕುಮಾರ್, ಸದಸ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ ಗೆಡ್ಡೆಚ್ಚಿ ಉಪಸ್ಥಿತರಿದ್ದರು.







