ಅ.26ರಂದು ಸುರತ್ಕಲ್ ಎಂಆರ್‌ಪಿಎಲ್ ರಸ್ತೆ ಸಂಚಾರ ಬಂದ್
ಮಂಗಳೂರು, ಅ. 20: ಸುರತ್ಕಲ್-ಕಾನ-ಎಂಆರ್‌ಪಿಎಲ್ ರಸ್ತೆ ದುರಸ್ತಿಗೆ ಒತ್ತಾಯಿಸಿ ಸ್ಥಳೀಯರು ಹಲವು ಹಂತಗಳಲ್ಲಿ ಹೋರಾಟ ನಡೆಸುತ್ತಿದ್ದರೂ ನಗರಪಾಲಿಕೆ ಮತ್ತು ಬೃಹತ್ ಉದ್ದಿಮೆಗಳು ಸಂಚಾರಕ್ಕೆ ಅಯೋಗ್ಯಗೊಂಡಿರುವ ರಸ್ತೆ ದುರಸ್ತಿಗೊಳಿಸಲು ಯಾವುದೇ ಕ್ರಮಕೈಗೊಳ್ಳದಿರುವುದರ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಕ್ಟೋಬರ್ 26ರಂದು ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಸುರತ್ಕಲ್-ಕಾನ-ಎಂಆರ್‌ಪಿಎಲ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್‌ಗೆ ನಾಗರಿಕ ಹೋರಾಟ ಸಮಿತಿ ಕಾನ-ಸುರತ್ಕಲ್ ಕರೆ ನೀಡಿದೆ.
ದಿನಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಘನವಾಹನಗಳ ಓಡಾಟದಿಂದಾಗಿ ಸುರತ್ಕಲ್‌ನಿಂದ ಎಂಆರ್‌ಪಿಎಲ್‌ಗೆ ಸಂಪರ್ಕ ಕಲ್ಪಿಸುವ ನಾಲ್ಕು ಕಿ.ಮೀ. ಉದ್ದದ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಎಂಆರ್‌ಪಿಎಲ್-ಬಿಎಎಸ್‌ಎಫ್-ಎಚ್‌ಪಿಸಿಎಲ್ ಸಹಿತ ಬೃಹತ್ ಉದ್ದಿಮೆಗಳ ವಾಹನ ಓಡಾಟದಿಂದಾಗಿ ರಸ್ತೆ ಪೂರ್ಣವಾಗಿ ಹದಗೆಟ್ಟಿದ್ದು ರಸ್ತೆ ಸರಿಪಡಿಸುವ ಜವಾಬ್ದಾರಿಯನ್ನು ಎಂಆರ್‌ಪಿಎಲ್ ವಹಿಸಿಕೊಳ್ಳಬೇಕು ಎಂದು ನಗರಪಾಲಿಕೆಯು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಕಂಪೆನಿಗಳು ಯಾವುದೇ ಕಾರಣಕ್ಕೂ ಸಾರ್ವಜನಿಕ ರಸ್ತೆಯನ್ನು ದುರಸ್ತಿಗೊಳಿಸುವುದು ಅಸಾಧ್ಯ ಎಂದು ಪಾಲಿಕೆಯ ಬೇಡಿಕೆಯನ್ನು ತಿರಸ್ಕರಿಸಿವೆ. ಸ್ಥಳೀಯ ಶಾಸಕರು, ಲೋಕಸಭಾ ಸದಸ್ಯರು ತಮ್ಮ ಜವಾಬ್ದಾರಿ ನಿವರ್ಹಿಸಿ ಪ್ರಶ್ನೆ ಇತ್ಯರ್ಥಗೊಳಿಸದೇ ಇರುವುದರಿಂದ ಈ ಭಾಗದ ಜನರು ಸಂಚರಿಸಲು ರಸ್ತೆಯಿಲ್ಲದೆ ನರಕಯಾತನೆ ಪಡುವಂತಾಗಿದೆ.
ಈಗಾಗಲೇ ಹಲವು ಸುತ್ತುಗಳ ಪ್ರತಿಭಟನೆಗಳನ್ನು ಹೋರಾಟ ಸಮಿತಿ ನಡೆಸಿದ್ದರೂ ಸಮಸ್ಯೆ ಪರಿಹಾರವಾಗದಿರುವುದರಿಂದ ಅ.26ರಂದು ರಸ್ತೆ ಸಂಚಾರ ಬಂದ್ ನಡೆಸುವ ಮೂಲಕ ಹೋರಾಟ ತೀವ್ರಗೊಳಿಸಲು ನಾಗರಿಕ ಹೋರಾಟ ಸಮಿತಿ ಕಾನ, ಸುರತ್ಕಲ್ ಕರೆ ನೀಡಿದೆ ಎಂದು ಸಮಿತಿಯ ಸಂಚಾಲಕ ಬಿ.ಕೆ. ಇಮ್ತಿಯಾಝ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.







