ಬಾಲಕನನ್ನು ಅಪಹರಿಸಿದ್ದ ಆರೋಪಿಯ ಸೆರೆ

ಪುತ್ತೂರು, ಅ.20: ಬಾಲಕನೊಬ್ಬನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದ ಐವರು ಆರೋಪಿಗಳಲ್ಲಿ ಈತ ಬಂಧಿತನಾಗಿರುವ 2ನೆ ಆರೋಪಿಯಾಗಿದ್ದು, ಇನ್ನು ಮೂವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಪುತ್ತೂರು ನಗರದ ಹೊರವಲಯದ ಕಾರ್ಜಾಲು ಎಂಬಲ್ಲಿನ ನಿವಾಸಿ ಇಬ್ರಾಹೀಂ ಸುಲೈಮಾನ್ ಎಂಬಾತ ಬಂಧಿತ ಆರೋಪಿ. ಪ್ರಕರಣದ ಓರ್ವ ಆರೋಪಿಯಾದ ಕೂರ್ನಡ್ಕ ನಿವಾಸಿ ಮುಸ್ತಫಾ ಎಂಬಾತನನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು. ತಲೆ ಮರೆಸಿಕೊಂಡಿರುವ ಇತರ ಮೂವರು ಆರೋಪಿಗಳಾದ ಸುಲೈಮಾನ್, ಮುಹಮ್ಮದ್ ಮುಸ್ತಫಾ, ನೌಶಾದ್ ಸೇರಿದಂತೆ ಇನ್ನೂ ಕೆಲವರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಬನ್ನೂರು ನಿವಾಸಿ ಬಿ.ಎಸ್. ಹಮೀದ್ ಎಂಬವರ ಪುತ್ರ ನೌಶಾದ್ ಎಂಬ ಬಾಲಕ 2016ರ ಫೆಬ್ರವರಿ 26ರಂದು ಪುತ್ತೂರು ನಗರಕ್ಕೆ ಬಂದಿದ್ದ ಸಂದರ್ಭದಲ್ಲಿ ಆರೋಪಿಗಳು ಆತನನ್ನು ಬೊಳುವಾರು ಬಳಿಯಿಂದ ಅಪಹರಿಸಿದ್ದರು ಎಂದು ಆರೋಪಿಸಲಾಗಿತ್ತು. ಅಪಹರಣಕ್ಕೊಳಗಾದ ಬಾಲಕನನ್ನು ನಂತರ ಆರೋಪಿಗಳು ಬಿಟ್ಟಿದ್ದು, ಬಾಲಕ ಸುರಕ್ಷಿತವಾಗಿ ಮರಳಿದ್ದ. ಈ ಬಗ್ಗೆ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ರಾಹೀಂ ಮುಸ್ತಫಾನನ್ನು ಬಂಧಿಸಿದ್ದರು. ಪುತ್ತೂರು ನಗರ ಠಾಣಾ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ಎಸ್ಸೈ ಓಮನ ನೇತೃತ್ವದ ತಂಡ ಆರೋಪಿಯನ್ನು ದಸ್ತಗಿರಿ ಮಾಡಿದ್ದು, ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಯನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.







