ಕೊನೆಯ ಸಂವಾದ ಗೆದ್ದ ಹಿಲರಿ ಕ್ಲಿಂಟನ್: ಸಿಎನ್‌ಎನ್ ಸಮೀಕ್ಷೆ

ಲಾಸ್ ವೇಗಸ್, ಅ. 20: ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಗಳ ಕೊನೆಯ ಸಂವಾದದಲ್ಲಿ, ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ತನ್ನ ರಿಪಬ್ಲಿಕನ್ ಎದುರಾಳಿ ಡೊನಾಲ್ಡ್ ಟ್ರಂಪ್‌ರನ್ನು ಭರ್ಜರಿ 13 ಶೇಕಡ ಅಂಕಗಳ ಅಂತರದಿಂದ ಸೋಲಿಸಿದ್ದಾರೆ ಎಂದು ಸಿಎನ್‌ಎನ್ ನಡೆಸಿದ ಸಮೀಕ್ಷೆಯೊಂದು ತಿಳಿಸಿದೆ.
ಸಂವಾದವನ್ನು ವೀಕ್ಷಿಸಿದವರ ಪೈಕಿ 52 ಶೇಕಡ ಮಂದಿ, ಹಿಲರಿ ಉತ್ತಮ ನಿರ್ವಹಣೆ ನೀಡಿದ್ದಾರೆ ಎಂದು ಹೇಳಿದರೆ, ಟ್ರಂಪ್ ವಿಜಯಿಯಾಗಿದ್ದಾರೆ ಎಂಬುದಾಗಿ 39 ಶೇಕಡ ಮಂದಿ ಅಭಿಪ್ರಾಯಪಟ್ಟಿದ್ದಾರೆ ಎಂದು ತನ್ನ ಸಮೀಕ್ಷೆಯನ್ನು ಬಿಡುಗಡೆ ಮಾಡಿದ ಸಿಎನ್‌ಎನ್ ಹೇಳಿದೆ.
ಸಿಎನ್‌ಎನ್ ಪ್ರಕಾರ, ಹಿಲರಿ ಎಲ್ಲ ಮೂರು ಅಧ್ಯಕ್ಷೀಯ ಅಭ್ಯರ್ಥಿಗಳ ಸಂವಾದಗಳಲ್ಲಿ ಜಯಿಸಿದ್ದಾರೆ. ಆದರೆ, ಲಾಸ್ ವೇಗಸ್‌ನಲ್ಲಿ ನಡೆದ ಮೂರನೆ ಹಾಗೂ ಕೊನೆಯ ಸಂವಾದದಲ್ಲಿ ಹಿಲರಿಯ ವಿಜಯದ ಅಂತರ ಅತ್ಯಂತ ಕಡಿಮೆ ಎಂದು ಅದು ಹೇಳಿದೆ.
ನ್ಯೂಯಾರ್ಕ್‌ನಲ್ಲಿ ನಡೆದ ಮೊದಲ ಸಂವಾದವನ್ನು ಹಿಲರಿ 35 ಶೇಕಡ ಅಂಕಗಳ ಅಂತರದಿಂದ ಗೆದ್ದರೆ, ಸೇಂಟ್ ಲೂಯಿಸ್‌ನಲ್ಲಿ ನಡೆದ ಎರಡನೆ ಸಂವಾದದಲ್ಲಿ 23 ಶೇಕಡ ಅಂಕಗಳ ಅಂತರದಿಂದ ವಿಜಯಿಯಾಗಿದ್ದಾರೆ.
ಈ ನಡುವೆ, ಮೂರನೆ ಸಂವಾದದಲ್ಲಿ ಗೆದ್ದಿರುವುದು ತಾವೇ ಎಂಬುದಾಗಿ ಎರಡೂ ಶಿಬಿರಗಳು ಹೇಳಿಕೊಂಡಿವೆ.
ಸೋತರೆ ಟ್ರಂಪ್ ಫಲಿತಾಂಶ ಒಪ್ಪುವುದಿಲ್ಲವೇ?
ನೀವು ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತರೆ ಚುನಾವಣಾ ಫಲಿತಾಂಶವನ್ನು ಒಪ್ಪಿಕೊಳ್ಳುತ್ತೀರಾ ಎಂಬುದಾಗಿ ಸಂವಾದದಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸಲು ಡೊನಾಲ್ಡ್ ಟ್ರಂಪ್ ನಿರಾಕರಿಸಿದರು.
‘‘ಆ ಸಮಯದಲ್ಲಿ ನಾನು ನಿಮಗೆ ಹೇಳುತ್ತೇನೆ’’ ಎಂದು ಟ್ರಂಪ್ ಉತ್ತರಿಸಿದರು.
ಅಧ್ಯಕ್ಷೀಯ ಚುನಾವಣೆಗಳ ಫಲಿತಾಂಶಗಳನ್ನು ಸ್ವೀಕರಿಸುವ ಅಮೆರಿಕದ ಸಂಪ್ರದಾಯವನ್ನು ನೀವು ಅನುಸರಿಸುವಿರೇ ಎಂಬ ಪ್ರಶ್ನೆಗೆ ಟ್ರಂಪ್ ಈ ರೀತಿಯಾಗಿ ಉತ್ತರಿಸಿದರು.
‘‘ಈ ವಿಷಯದಲ್ಲಿ ನಾನು ನಿಮ್ಮನ್ನು ಕುತೂಹಲದಲ್ಲಿರಿಸುತ್ತೇನೆ’’ ಎಂದರು.
20 ಕೋಟಿ ಮತದಾರರು
ನವೆಂಬರ್ 8ರಂದು ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಹಾಕಲು 20 ಕೋಟಿಗೂ ಅಧಿಕ ಮಂದಿ ತಮ್ಮ ಹೆಸರುಗಳನ್ನು ನೋಂದಾಯಿಸಿದ್ದಾರೆ.
ಇದು ಅಮೆರಿಕದ ಇತಿಹಾಸದಲ್ಲಿಯೇ ಗರಿಷ್ಠ ದಾಖಲೆಯಾಗಿದೆ ಎಂದು ರಾಜಕೀಯ ಅಂಕಿಅಂಶಗಳ ಸಂಸ್ಥೆ ‘ಟಾರ್ಗೆಟ್‌ಸ್ಮಾರ್ಟ್’ ತಿಳಿಸಿದೆ.







