ನ.1ರಂದು ಭಾಷಾ ಅಲ್ಪಸಂಖ್ಯಾತ ಸಂಘಟನೆಗಳಿಂದ ಸೆಕ್ರೆಟರಿಯೇಟ್ ಎದುರು ಧರಣಿ

ಕಾಸರಗೋಡು, ಅ.20: ಕೇರಳದಲ್ಲಿರುವ ಭಾಷಾ ಅಲ್ಪಸಂಖ್ಯಾತರ ನ್ಯಾಯೋಚಿತ ಬೇಡಿಕೆಗಳನ್ನು ಸರಕಾರದ ಮುಂದಿಡಲು ಹಾಗೂ ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ಸರಕಾರವನ್ನು ಒತ್ತಾಯಿಸುವ ಸಲುವಾಗಿ ನ.1ರಂದು ತಿರುವನಂತಪುರದ ಸೆಕ್ರೆಟರಿಯೇಟ್ ಮುಂಭಾಗದಲ್ಲಿ ರಾಜ್ಯದ ಕನ್ನಡ ಹಾಗೂ ತಮಿಳು ಭಾಷಾ ಸಂಘಟನೆಗಳ ಪ್ರತಿನಿಧಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಕನ್ನಡಾಭಿಮಾನಿಗಳ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಸಂಘಟನೆಯ ಪದಾಧಿಕಾರಿಗಳು ತಿಳಿಸಿದರು.
ಕಾಸರಗೋಡು ಪ್ರೆಸ್‌ಕ್ಲಬ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದಲ್ಲಿರುವ ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನದತ್ತವಾದ ಹಕ್ಕು ಹಾಗೂ ಸವಲತ್ತುಗಳಿವೆ. ನಿರಂತರವಾಗಿ ಅದರ ಉಲ್ಲಂಘನೆಯಾಗುತ್ತಿದ್ದು ಭಾಷಾ ಅಲ್ಪಸಂಖ್ಯಾತರ ಭಾಷೆ ಹಾಗೂ ಸಂಸ್ಕೃತಿ ವಿನಾಶದ ಅಂಚಿನಲ್ಲಿದೆ. ಈ ನಿಟ್ಟಿನಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನ.1ರಂದು ತಿರುವನಂತಪುರ ಸೆಕ್ರೆಟರಿಯೇಟ್ ಎದುರು ಬೃಹತ್ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು.
ಮಲಯಾಳಂ ಭಾಷಾ ಮಸೂದೆಯಲ್ಲಿ ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆಯನ್ನು ಮಾಡಬೇಕು. ಶಿಕ್ಷಣ, ಕಾನೂನು, ಆಡಳಿತ, ಸಾರ್ವಜನಿಕ ವ್ಯವಹಾರ ಯಾವುದೇ ವಿಭಾಗಗಳಲ್ಲಿ ಭಾಷಾ ಅಲ್ಪಸಂಖ್ಯಾತರ ಮೇಲೆ, ಭಾಷಾ ಅಲ್ಪಸಂಖ್ಯಾತ ಪ್ರದೇಶಗಳಲ್ಲಿ ಮಲಯಾಳಂ ಕಡ್ಡಾಯ ಮಾಡಬಾರದು. ಎಲ್ಲ ವಲಯಗಳಲ್ಲೂ ಮಲಯಾಳಂಗೆ ಸಮಾನವಾಗಿ ಅಥವಾ ಮಲಯಾಳಂನ ಬದಲಾಗಿ ಕನ್ನಡ ಅಥವಾ ತಮಿಳು ಭಾಷೆಗಳನ್ನು ಬಳಸಬೇಕು. ಎಲ್ಲಾ ಸಾರ್ವಜನಿಕ ಸರಕಾರಿ ಮಾಹಿತಿಗಳನ್ನು ಮಲಯಾಳದೊಂದಿಗೆ ಅಲ್ಪಸಂಖ್ಯಾತ ಭಾಷೆಗಳಲ್ಲೂ ಒದಗಿಸಬೇಕು. ಸರಕಾರದೊಂದಿಗೆ ಅಲ್ಪಸಂಖ್ಯಾತ ಭಾಷೆಗಳಲ್ಲಿ ವ್ಯವಹರಿಸಲು ಸಾಧ್ಯವಾಗುವಂತೆ ಈಗಾಗಲೇ ಜಾರಿಯಲ್ಲಿರುವ ಸರಕಾರಿ ಆದೇಶದ ಸಹಿತ ಭಾಷಾ ಅಲ್ಪಸಂಖ್ಯಾತರ ಪರವಾದ ಎಲ್ಲಾ ಸರಕಾರಿ ಆದೇಶ ಹಾಗೂ ಸುತ್ತೋಲೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸರಕಾರಿ ಅಧಿಕಾರಿಗಳಿಗೆ ಸೂಚಿಸಬೇಕು. ಇದಕ್ಕೆ ತಪ್ಪಿದ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಲು ಅವಕಾಶವಿರುವಂತೆ ಕಾನೂನು ರಚಿಸಬೇಕು. ಪ್ರತಿವರ್ಷ ನ.1ನ್ನು ಭಾಷಾ ಅಲ್ಪಸಂಖ್ಯಾತ ದಿನವನ್ನಾಗಿ ಘೋಷಿಸಿ ಸರಕಾರಿ ಮಟ್ಟದಲ್ಲಿ ಆಚರಿಸಬೇಕು. ಭಾಷಾ ಅಲ್ಪಸಂಖ್ಯಾತರ ಪರ ಸರಕಾರಿ ಆದೇಶಗಳ ಬಗ್ಗೆ ಸರಕಾರಿ ಅಧಿಕಾರಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿಯನ್ನುಂಟು ಮಾಡಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ಸತ್ಯಾಗ್ರಹ ನಡೆಯುವುದು. ಕನ್ನಡ ಹಾಗೂ ತಮಿಳು ಭಾಷಾ ಅಲ್ಪಸಂಖ್ಯಾತರಾದ ಸುಮಾರು 500 ಮಂದಿ ಭಾಗವಹಿಸುವರು. ಅಲ್ಲದೇ, ಕರ್ನಾಟಕ ರಾಜ್ಯದಿಂದಲೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಸಮಿತಿ ಅಧ್ಯಕ್ಷ ಕೆ.ಎಂ.ಬಳ್ಳಕ್ಕುರಾಯ, ಸಮನ್ವಯ ಸಮಿತಿ ಅಧ್ಯಕ್ಷ ಬಿ.ಪುರುಷೋತ್ತಮ ಮಾಸ್ತರ್, ಸುಬ್ರಹ್ಮಣ್ಯ ಭಟ್, ಜಯರಾಮ ಎಡನೀರು, ಸದಾನಂದ ರೈ, ನಾರಾಯಣ ಗಟ್ಟಿ ಉಪಸ್ಥಿತರಿದ್ದರು.







