ಭೂಮಿಗಾಗಿ ಹೋರಾಟ: ಮತ್ತೊಬ್ಬ ದಲಿತನ ಆತ್ಮಹತ್ಯೆ

ಜುನಾಗಡ,ಅ.20: ದಲಿತರಿಗೆ ಭೂ ಹಕ್ಕುಗಳಿಗಾಗಿ ಒತ್ತಾಯಿಸಿ ರಾಷ್ಟ್ರಾದ್ಯಂತ ನಡೆಯುತ್ತಿರುವ ಅಭಿಯಾನದ ನಡುವೆಯೇ ಜುನಾಗಡದಲ್ಲಿ ಭೂಮಿಗಾಗಿ ಆಗ್ರಹಿಸಿ ವರ್ಷಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದ ದಲಿತ ವ್ಯಕ್ತಿಯೋರ್ವ ವ್ಯವಸ್ಥೆಗೆ ಬೇಸತ್ತು ಸಾವಿಗೆ ಶರಣಾಗಿದ್ದಾನೆ.
ಈ ವಾರದ ಆರಂಭದಲ್ಲಿ ಜುನಾಗಡಲ್ಲಿ ಭೂ ಹಕ್ಕುಗಳಿಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಮೂವರು ದಲಿತರು ವಿಷ ಸೇವಿಸಿದ್ದರು. ಈ ಪೈಕಿ ಪರ್ಬತ್ ಪರಮಾರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರೆ, ಉಳಿದ ಇಬ್ಬರ ದೇಹಸ್ಥಿತಿ ಸ್ಥಿರವಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಯೋರ್ವರು ತಿಳಿಸಿದರು.
ಗುಜರಾತ್‌ನ ಉನಾದಲ್ಲಿ ಸತ್ತ ದನದ ಚರ್ಮವನ್ನು ಸುಲಿಯುತ್ತಿದ್ದಕ್ಕಾಗಿ ಸವರ್ಣೀಯ ಹಿಂದುಗಳಿಂದ ನಾಲ್ವರು ದಲಿತ ಯುವಕರ ಮೇಲೆ ಅಮಾನುಷ ಹಲ್ಲೆ ನಡೆದ ಬಳಿಕ ಭೂಮಿ ಸೇರಿದಂತೆ ತಮ್ಮ ಹಕ್ಕುಗಳಿಗಾಗಿ ದಲಿತರು ನಡೆಸುತ್ತಿರುವ ಹೋರಾಟ ಇಡೀ ದೇಶವನ್ನೇ ವ್ಯಾಪಿಸಿದೆ.
ಎರಡು ದಶಕಗಳಿಗೂ ಹಿಂದೆ ಗೋಮಾಳದಲ್ಲಿ ಕೃಷಿಗೆ ಯತ್ನಿಸಿದ್ದಕ್ಕಾಗಿ ಪರಮಾರ ಮತ್ತು ಇತರ ದಲಿತರನ್ನು ಮೇಲ್ಜಾತಿಗಳ ಗ್ರಾಮಸ್ಥರು ಬಲವಂತದಿಂದ ಗ್ರಾಮದಿಂದ ಹೊರಕ್ಕೆ ಹಾಕಿದ್ದರು. ಆಗಿನಿಂದಲೂ ಅವರು ಪರ್ಯಾಯ ಭೂಮಿಗಾಗಿ ಆಗ್ರಹಿಸುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಭೂಮಿಗಾಗಿ ಆಗ್ರಹಿಸಿ ನಿರಾಶನಾಗಿ ದಲಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವುದು ಘೋವಾಗಿದೆ ಎಂದು ಹೇಳಿದ ದಲಿತರ ಮಾನವ ಹಕ್ಕುಗಳಿಗಾಗಿ ರಾಷ್ಟ್ರೀಯ ಅಭಿಯಾನದ ಸ್ಥಾಪಕ ಪಾಲ್ ದಿವಾಕರ್ ಅವರು, ಶಾಸನಬದ್ಧವಾಗಿ ಅವರಿಗೆ ಸಲ್ಲಬೇಕಾಗಿದ್ದ ಭೂಮಿಯನ್ನು ಮಂಜೂರು ಮಾಡಲು ಸರಕಾರವು ಇಷ್ಟೊಂದು ವರ್ಷಗಳ ಕಾಲ ವಿಳಂಬಿಸಿದ್ದು ಸರಿಯಲ್ಲ, ಸರಕಾರವು ದಲಿತರನ್ನು ಕಿರುಕುಳದಿಂದ ರಕ್ಷಿಸುವಲ್ಲಿ ವಿಫಲವಾಗುತ್ತಿದೆ ಎಂದರು.
ಜುನಾಗಡ ಜಿಲ್ಲೆಯಲ್ಲಿ 1998ರಲ್ಲಿ ಕೆಲವು ದಲಿತರಿಗೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಇತರರು ಪಿತ್ರಾರ್ಜಿತ ಕೃಷಿಭೂಮಿಯನ್ನು ಹೊಂದಿದ್ದಾರೆ. ಆ ಬಳಿಕ ಯಾವುದೇ ಭೂ ಮಂಜೂರಾತಿಯಾಗಿಲ್ಲ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದರು.
ಭಾರತದ ಕನಿಷ್ಠ ಅರ್ಧದಷ್ಟು ಕೆಳಜಾತಿಗಳ ಜನರು ಭೂಹೀನರಾಗಿದ್ದಾರೆ. ಶತಮಾನಗಳಷ್ಟು ಪುರಾತನವಾದ ಸಾಮಾಜಿಕ ವ್ಯವಸ್ಥೆಯಲ್ಲಿ ಭೂಹೀನ ದಲಿತರು ಅತ್ಯಂತ ತಳಮಟ್ಟದಲ್ಲಿದ್ದಾರೆ ಮತ್ತು ಇತ್ತೀಚಿನ ಕಟ್ಟರ್ ಗೋರಕ್ಷಕರು ಸೇರಿದಂತೆ ಮೇಲ್ಜಾತಿಗಳ ಹಿಂದುಗಳಿಂದ ತಾರತಮ್ಯ ಮತ್ತು ದೌರ್ಜನ್ಯಗಳಿಗೆ ಗುರಿಯಾಗುತ್ತಲೇ ಇದ್ದಾರೆ.







