ರಘುಪತಿ ಭಟ್ ಹೇಳಿಕೆಗೆ ಉದಯ ಸುವರ್ಣ ತಿರುಗೇಟು

ಉಡುಪಿ, ಅ.20: ತಾನು ಸಾರ್ವಜನಿಕರ ನೇತೃತ್ವದಲ್ಲಿ ನನ್ನ ಬೈಕಾಡಿ ಮತ್ತು ಹಾರಾಡಿ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಹೋರಾಟ ನಡೆಸುತ್ತಿರುವುದಕ್ಕೂ, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಫಿಶ್‌ಮಿಲ್‌ನಲ್ಲಿ ಕೆಲಸ ಮಾಡುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಜಿಲ್ಲೆಯಲ್ಲಿ ಸಿಆರ್‌ಝಡ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಚೆನ್ನೈನ ಹಸಿರುಪೀಠ ಕಳೆದ ಮೇ ತಿಂಗಳಿನಿಂದ ತಡೆಯಾಜ್ಞೆ ನೀಡಲು ಕಾರಣವಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ ಬೈಕಾಡಿಯ ಉದಯ ಸುವರ್ಣ ಹೇಳಿದ್ದಾರೆ.
ಕಳೆದ ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ರಘುಪತಿ ಭಟ್ ತಮ್ಮ ವಿರುದ್ಧ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟೀಕರಣ ನೀಡಿದ ಉದಯ ಸುವರ್ಣ, ಫಿಶ್‌ಮಿಲ್‌ನಲ್ಲಿ ತಾನು ಕೆಲಸ ಮಾಡಿದರೆ ಅದಕ್ಕೆ ಸಂಬಳ ತೆಗೆದುಕೊಳ್ಳುತ್ತೇನೆ. ಅದಕ್ಕೂ ನಾನು 2006ರಿಂದಲೇ ನಡೆಸುತ್ತಾ ಬಂದಿರುವ ಸಾರ್ವಜನಿಕ ಹಿತಾಸಕ್ತಿಯ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಹೋರಾಟಕ್ಕೆ ಕೆಲಸದಿಂದ ತೊಂದರೆಯಾದರೆ ಕೆಲಸವನ್ನು ಬಿಡಲು ಸಹ ನಾನು ಸಿದ್ಧನಿದ್ದೇನೆ ಎಂದರು.
ನನ್ನ ಗ್ರಾಮವಾದ ಬೈಕಾಡಿ ಹಾಗೂ ಹಾರಾಡಿಯಲ್ಲಿ ಅಕ್ರಮ ಮರಳುಗಾರಿಕೆ ಪ್ರಾರಂಭವಾಗಿದ್ದೇ ರಘುಪತಿ ಭಟ್ ಅವರು ಶಾಸಕರಾಗಿದ್ದ ಅವಧಿಯಲ್ಲಿ. ಇದರಿಂದ ನಮ್ಮ ಗ್ರಾಮಸ್ಥರಿಗೆ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಅಷ್ಟಿಷ್ಟಲ್ಲ. ಆಗಲೇ ನಾವು ಸಂಬಂಧಪಟ್ಟ ಇಲಾಖೆಗಳಿಗೆ ಕೊಟ್ಟ ಮನವಿಗಳ ಕುರಿತಂತೆ ಯಾವುದೇ ಕ್ರಮವನ್ನು ಜರಗಿಸಲ್ಲಿಲ್ಲ ಎಂದರು.
ಬೈಕಾಡಿ ಮತ್ತು ಹಾರಾಡಿ ಗ್ರಾಮಗಳ ಸಿಆರ್‌ಝಡ್ ಪ್ರದೇಶ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರೊಂದಿಗೆ ಸೇರಿ ನಾನು ನಡೆಸುತ್ತಿರುವ ಹೋರಾಟಕ್ಕೆ ಹತ್ತು ವರ್ಷ ತುಂಬಿದೆ. ಅಂದು ಶಾಸಕರಾಗಿದ್ದ ರಘುಪತಿ ಭಟ್ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈಗಿನ ಶಾಸಕರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಗ್ರಾಪಂನಿಂದ ಹಿಡಿದು ಜಿಲ್ಲಾಧಿಕಾರಿಯವರಿಗೆ ಎಲ್ಲರಿಗೂ ಮನವಿ ಕೊಟ್ಟು, ಧರಣಿ, ಪ್ರತಿಭಟನೆ ನಡೆಸಿ ಹತಾಶರಾಗಿ ಕೊನೆಯ ಕ್ರಮವಾಗಿ ಮೇ 10ಕ್ಕೆ ಚೆನ್ನೈ ಹಸಿರು ಪೀಠಕ್ಕೆ ನಾನು ಸೇರಿದಂತೆ ಎರಡೂ ಗ್ರಾಮಗಳ 6 ಮಂದಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆವು. ಅದೇ ಮೇ 17ಕ್ಕೆ ಹಸಿರು ಪೀಠ ಮರಳುಗಾರಿಕೆಗೆ ತಡೆಯಾಜ್ಞೆ ನೀಡಿತು ಎಂದು ಉದಯ ಸುವರ್ಣ ವಿವರಿಸಿದರು.
ನಾವು ಕೇಳಿದ್ದು ಬೈಕಾಡಿ ಮತ್ತು ಹಾರಾಡಿ ಗ್ರಾಮ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮವನ್ನು ನಿರ್ಬಂಧಿಸಬೇಕೆಂದು. ಆದರೆ ಹಸಿರು ಪೀಠ ವಿಚಾರಣೆ ವೇಳೆ ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಮರಳುಗಾರಿಕೆಯಿಂದ ಜನರಿಗೆ ಹಾಗೂ ಪರಿಸರಕ್ಕೆ ಆಗುತ್ತಿರುವ ತೊಂದರೆಯನ್ನು ಪರಿಗಣಿಸಿ ಇಡೀ ಜಿಲ್ಲೆಯ ಸಿಆರ್‌ಝಡ್ ವ್ಯಾಪ್ತಿಯ ಮರಳುಗಾರಿಕೆಗೆ ತಡೆಯಾಜ್ಞೆ ನೀಡಿದೆ ಎಂದರು.
ಮರಳುಗಾರಿಕೆಗೂ ತನಗೂ ಸಂಬಂಧವಿಲ್ಲ ಎಂಬ ರಘುಪತಿ ಭಟ್ ಅವರ ಹೇಳಿಕೆಯನ್ನು ಖಂಡಿಸಿದ ಅವರು, ಹೆತ್ತವರೊಂದಿಗೆ ಮೀನುಗಾರಿಕೆ ವೃತ್ತಿ ನಡೆಸುವ ನನಗೆ, ನಾಲ್ಕೂವರೆ ವರ್ಷ ಮರಳು ಕಾರ್ಮಿಕನಾಗಿ ದುಡಿದು ಮರಳು ಕಾರ್ಮಿಕರ ಸಮಸ್ಯೆ, ಸಂಕಷ್ಟಗಳನ್ನು ಚೆನ್ನಾಗಿ ಅರಿತಿರುವ ನನಗೂ ಮರಳುಗಾರಿಕೆಗೆ ಸಂಬಂಧವಿಲ್ಲ ಎನ್ನುವುದು ಹಾಸ್ಯಾಸ್ಪದ ಎಂದರು.
ನದಿ ತೀರದಲ್ಲೇ ಹುಟ್ಟಿ ಬೆಳೆದು, ಅಕ್ರಮ ಮರಳುಗಾರಿಕೆಯಿಂದ ಆಗುವ ಸಮಸ್ಯೆಗಳನ್ನು ಸ್ವತಹ ಅನುಭವಿಸಿರುವ ಹಾಗೂ ಜನರು ಇದರಿಂದ ಪಡುವ ಸಂಕಷ್ಟಗಳನ್ನು ಕಂಡು ಅರಿತಿರುವ ನನಗೆ, ಮರಳು ತೆಗೆದ ಗುಂಡಿಗೆ ಬಿದ್ದು ಮೃತಪಟ್ಟವರ ಕುಟುಂಬದ ನೋವು ಅರಿವಿಲ್ಲವೇ ಎಂದವರು ಪ್ರಶ್ನಿಸಿದರು.
ತಾವು ಶಾಸಕರಾಗಿದ್ದಾಗ ಹೊಸ ಮರಳು ನೀತಿಯನ್ನು ಜಾರಿಗೊಳಿಸಲು ಮುಂದಾಗದಿರುವುದು ನಿಮ್ಮ ಅಂದಿನ ಸರಕಾರದ ಆಡಳಿತ ವೈಫಲ್ಯವಲ್ಲವೇ. ನೀವು ಸೇರಿದಂತೆ ಜನಪ್ರತಿನಿಧಿಗಳಿಂದ ಯಾವುದೇ ನ್ಯಾಯ ಸಿಗದೇ ಹೋದಾಗ ನಾವು ಗ್ರಾಮಸ್ಥರು ಹಸಿರು ಪೀಠಕ್ಕೆ ಹೋಗಿರುವುದು ಸತ್ಯ ಎಂದರು.
ಹೋರಾಟದ ಹಿನ್ನೆಲೆಯಲ್ಲಿ ಕಳೆದ ಗ್ರಾಪಂ ಚುನಾವಣೆಯಲ್ಲಿ ಸಚಿವ ಪ್ರಮೋದ್ ಅವರ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ವಿರುದ್ಧ ಸ್ಪರ್ಧಿಸುವುದಕ್ಕಾಗಿ ಕೆಲಸಕ್ಕೆ ರಾಜಿನಾಮೆ ನೀಡಿದ್ದೇನೆ. ಅಕ್ರಮ ಮರಳುಗಾರಿಕೆ ವಿರುದ್ಧ ಹೋರಾಟದ ಉದ್ದೇಶದಿಂದಲೇ ನಾನು ಕೆಲಸ ಬಿಟ್ಟಿರುವುದು ಗ್ರಾಮಸ್ಥರಿಗೆ ತಿಳಿದಿದೆ. ನಾನು ಕೆಲಸ ಬಿಟ್ಟಿರುವುದು ಸಚಿವರಿಗೆ ಗೊತ್ತಿದ್ದರೂ, ನಾಲ್ಕು ತಿಂಗಳ ಹಿಂದೆ ಮತ್ತೆ ಅವರ ಫಿಶ್‌ಮಿಲ್‌ನಲ್ಲಿ ಕೆಲಸಕ್ಕೆ ಸೇರಿರುವುದು ಅವರಿಗೆ ತಿಳಿದಿಲ್ಲ. ರಘುಪತಿ ಭಟ್ ಅವರು ಕೇವಲ ರಾಜಕೀಯ ಲಾಭಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುತಿದ್ದಾರೆ ಎಂದವರು ದೂರಿದರು.
ಹಸಿರು ಪೀಠದಿಂದ ಅರ್ಜಿ ಹಿಂದೆಗೆಯುವಂತೆ ಈವರೆಗೆ ಸಚಿವರಾಗಲಿ, ಜಿಲ್ಲಾಧಿಕಾರಿಗಳಾಗಲಿ ನಮ್ಮಂದಿಗೆ ಮಾತನಾಡಿಲ್ಲ. ಹಿಂದಿನ ಜಿಲ್ಲಾಧಿಕಾರಿ ಬಳಿ ಮಾತನಾಡಲು ಹೋಗಿದ್ದಾಗ ಅವರು ನಮ್ಮಾಂದಿಗೆ ಮಾತನಾಡಲು ನಿರಾಕರಿಸಿದ್ದರು. ಈಗ ಯಾರು ಒತ್ತಡ ಹಾಕಿದರೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಉದಯ ಸುವರ್ಣ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರಾದ ರೊನಾಲ್ಡ್ ಪುಟಾರ್ಡೊ, ನಾರಾಯಣ್ ಶ್ರೀಯಾನ್, ಸುದಾನಂದ ಕುಕ್ಕುಡೆ ಹಾಗೂ ಸುರೇಶ್ ಕುಂದರ್ ಉಪಸ್ಥಿತರಿದ್ದರು.







