ನಮೋ ಬ್ರಿಗೇಡ್‌ನಿಂದ ಘೋಷಿತ ಅಸ್ಪೃಶ್ಯತಾ ಆಚರಣೆ: ಪ್ರಕರಣ ದಾಖಲಿಸಿ ಬಂಧಿಸಲು ಎಸ್ಪಿಗೆ ದೂರು

ಉಡುಪಿ, ಅ.20: ದಲಿತರ ನಡೆಯನ್ನು ಅವಮಾನಿಸುವ ಮತ್ತು ದಲಿತರು ನಡೆದುಹೋದ ಹಾದಿಯನ್ನು ಶುದ್ದೀಕರಿಸಲು ಕರೆ ನೀಡುವ ಮೂಲಕ ಸಂಘ ಟಿತ ಮತ್ತು ಘೋಷಿತ ಅಸ್ಪೃಶ್ಯತಾ ಆಚರಣೆಗೆ ಮುಂದಾಗಿರುವ ದುಷ್ಕರ್ಮಿಗಳ ವಿರುದ್ದ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸುವಂತೆ ಆಗ್ರಹಿಸಿ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಉಡುಪಿ ಜಿಲ್ಲಾ ನಿಯೋಗವು ಗುರುವಾರ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿತು.
ಅ.4ರಿಂದ 9ರವರೆಗೆ ನಡೆದ ಸಮಿತಿಯ ‘ಚಲೋ ಉಡುಪಿ’ ಸ್ವಾಭಿಮಾನಿ ಸಂಘರ್ಷ ಜಾಥಾವನ್ನು ಸಹಿಸದ ಯುವಬ್ರಿಗೇಡ್‌ನ ಸಂಸ್ಥಾಪಕ ಮಿಥುನ್ ಚಕ್ರವರ್ತಿ ಅಲಿಯಾಸ್ ಚಕ್ರವರ್ತಿ ಸೂಲಿಬೆಲೆ ಉಡುಪಿಯು ದಲಿತರ ನಡೆ ಯಿಂದಾಗಿ ಮಲಿನಗೊಂಡಿದೆ ಶುದ್ದೀಕರಿಸೋಣ ಬನ್ನಿ ಎಂದು ಘೋಷಿತ ಮತ್ತು ಸಂಘಟಿತ ಅಸ್ಪೃಶ್ಯತಾ ಆಚರಣೆಗೆ ಮುಂದಾಗಿರುವುದು ಸಂವಿಧಾನ ವಿರೋಧಿ ನಡೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಕಾಯ್ದೆಯ ಅನ್ವಯ ಅಪರಾಧವಾಗಿದೆಂದು ದೂರಿನಲ್ಲಿ ತಿಳಿಸಲಾಗಿದೆ.
ಪಂಕ್ತಿಭೇದ ನಿಷೇಧಕ್ಕೆ ಸಂಬಂಧಪಟ್ಟಂತೆ ಪೇಜಾವರ ಸ್ವಾಮೀಜಿ ದಲಿತರು ಮಠಕ್ಕೆ ಬಂದರೆ ಉಪವಾಸ ಕೂರುವುದಾಗಿ ಹೇಳಿಕೆ ನೀಡಿ ತಮ್ಮ ಸ್ಥಾಪಿತ ಯಥಾಸ್ಥಿತಿ ವಾದವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಬಸವಣ್ಣನವರ ವಚನವನ್ನು ತಪ್ಪಾಗಿ ಉಲ್ಲೇಖಿಸಿ ಬಸವಣ್ಣ ಮತ್ತು ಇಡೀ ಬಸವಾನುಯಾಯಿ ಗಳನ್ನು ಅವಮಾನಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ದಲಿತರು ನಡೆದು ಹೋದ ಹಾದಿಯನ್ನು ಶುದ್ದೀಕರಿಸಲು ಕನಕದಾಸರ ಹೆಸರಿನಲ್ಲಿ ಕನಕ ನಡೆ ಎಂಬ ಕಾರ್ಯಕ್ರಮವನ್ನು ನಡೆಸಿ ಕನಕದಾಸರನ್ನು ಅವಮಾನಿಸಲಾಗುತ್ತಿದೆ. ಈ ಕ್ರಮವನ್ನು ಖಂಡಿಸಿ ಅದೇ ದಿನ ದಲಿತರ ಸ್ವಾಭಿಮಾನಿ ನಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಶ್ರೀರಾಮ ಸೇನೆಯ ರಾಜ್ಯ ಮುಖಂಡ ಪ್ರಮೋದ್ ಮುತಾಲಿಕ್, ವಿಎಚ್‌ಪಿ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್, ಬಜರಂಗದಳ ಜಿಲ್ಲಾಧ್ಯಕ್ಷ ದಿನೇಶ್ ಮೆಂಡನ್, ಮಾಜಿ ಶಾಸಕ ರಘುಪತಿ ಭಟ್ ಅವರು ಸ್ವಾಭಿಮಾನಿ ನಡೆ ಕಾರ್ಯಕ್ರಮದ ಮೂಲಕ ಉಡುಪಿಯನ್ನು ಪ್ರವೇಶ ಮಾಡುವ ಯಾರೂ ವಾಪಸ್ಸು ಹೋಗುವುದಿಲ್ಲ ಮತ್ತು ಹಾಗೆ ವಾಪಸ್ಸು ಹೋಗಲು ನಾವು ಬಿಡುವುದಿಲ್ಲ ಎಂದು ಇಡೀ ದಲಿತ ದಮನಿತ ಸಮುದಾಯಗಳಿಗೆ ಪ್ರಾಣ ಬೆದರಿಕೆಯೊಡ್ಡಿದ್ದಾರೆ.
ಆದುದರಿಂದ ಎಲ್ಲರ ವಿರುದ್ಧ ಸಂವಿಧಾನ ವಿರೋಧಿ ನಡೆ, ದೇಶದ್ರೋಹ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಕಾಯಿದೆ ಮತ್ತು ಪ್ರಾಣ ಬೆದರಿಕೆ ಆರೋಪಗಳ ಅಡಿಯಲ್ಲಿ ಮೊಕದ್ದಮೆಗಳನ್ನು ದಾಖಲಿಸಿ ಬಂಧಿಸಬೇಕು ಮತ್ತು ಸಮಿತಿಯ ವತಿಯಿಂದ ಉಡುಪಿಯಲ್ಲಿ ಹಮ್ಮಿಕೊಳ್ಳ ಲಾಗಿರುವ ದಲಿತ ದಮನಿತರ ಸ್ವಾಭಿಮಾನಿ ನಡೆ ಕಾರ್ಯಕ್ರಮಕ್ಕೆ ಸೂಕ್ತ ಪೋಲೀಸ್ ಬಂದೋಬಸ್ತ್ ಏರ್ಪಡಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಮನವಿಯನ್ನು ಎಸ್ಪಿ ಕೆ.ಟಿ.ಬಾಲಕೃಷ್ಣ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಶ್ಯಾಮ್‌ರಾಜ್ ಬಿರ್ತಿ, ಸುಂದರ್ ಮಾಸ್ತರ್, ಜಿ.ರಾಜಶೇಖರ್, ಪ್ರೊ.ಫಣಿರಾಜ್, ಎಸ್.ಎಸ್.ಪ್ರಸಾದ್, ವಿಶ್ವನಾಥ ಪೇತ್ರಿ, ಜಯನ್ ಮಲ್ಪೆ, ಅಝೀಝ್ ಉದ್ಯಾವರ ಮೊದಲಾದವರು ಉಪಸ್ಥಿತರಿದ್ದರು.







