ಮೂಡಿಗೆರೆ: ವಸತಿ ಹೀನರಿಗೆ ವಸತಿ ನೀಡಲು ಒತ್ತಾಯಿಸಿ ಧರಣಿ

ಮೂಡಿಗೆರೆ, ಅ.20: ವಸತಿ ಹೀನ ಬಡವರು, ಕೂಲಿ ಕಾರ್ಮಿಕರಿಗೆ ವಸತಿ ವ್ಯವಸ್ಥೆಯನ್ನು ಕೂಡಲೇ ಮಾಡಿಕೊಡುವಂತೆ ಒತ್ತಾಯಿಸಿ ವಸತಿಗಾಗಿ ಹೋರಾಟ ಸಮಿತಿ ನೇತೃತ್ವದಲ್ಲಿ ನೂರಾರು ಮಂದಿ ಸರ್ವೋದಯ ನಗರದಿಂದ ಮೂಡಿಗೆರೆ ಪಟ್ಟಣದವರೆಗೆ ಮೆರವಣಿಗೆ ನಡೆಸಿ ತಹಶೀಲ್ದಾರ್ ಕಚೇರಿ ಎದುರು ಗುರುವಾರ ಧರಣಿ ನಡೆಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಬಿ.ರುದ್ರಯ್ಯ ಮಾತನಾಡಿ, ಹಳೆಮೂಡಿಗೆರೆ ವ್ಯಾಪ್ತಿಯ ಸವೋದಯ ನಗರ ಮತ್ತು ಬಾಪೂಜಿ ನಗರದಲ್ಲಿ ನೂರಾರು ಕುಟುಂಬಗಳು ಕೂಲಿ ಕಾರ್ಮಿಕರಾಗಿ ಜೀವನ ನಡೆಸುತ್ತಿದ್ದಾರೆ. ಒಂದೊಂದು ಕುಟುಂಬದಲ್ಲೂ 6ರಿಂದ 7 ಸದಸ್ಯರಿದ್ದು, ವಿದ್ಯಾಭ್ಯಾಸ ಮಾಡುವ ಮಕ್ಕಳೊಂದಿಗೆ ಜೀವನ ನಡೆಸಲು ಕಷ್ಟವಾಗಿದೆ. ಮಾತ್ರವಲ್ಲದೇ ಬಾಡಿಗೆ ಮನೆಗಳು ಒಂದೊಂದೇ ಕೊಠಡಿಯದಾಗಿದ್ದು, ಪ್ರಾಣಿಗಳಂತೆ ಬದುಕುವಂತಾಗಿದೆ. ಈ ಹಿನ್ನೆಲೆಯಲ್ಲಿ ವಸತಿ ನೀಡಲು ಒತ್ತಾಯಿಸಿ ಹಲವು ಸಲ ಹಳೆ ಮೂಡಿಗೆರೆ ಗ್ರಾಪಂಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಧರಣಿ ನಿರತರು ಆರೋಪಿಸಿದರು.
ಈ ಭಾಗದಲ್ಲಿ ವಸತಿ ವ್ಯವಸ್ಥೆಗೆ ಸಂಬಂಧಿಸಿ ಭೂಮಿಯ ವಿವರದ ಮಾಹಿತಿಯನ್ನು ತಾಲೂಕು ಆಡಳಿತ, ಜಿಲ್ಲಾ ಆಡಳಿತ ಹಾಗೂ ರಾಜ್ಯ ಸರಕಾರಕ್ಕೂ ಮನವಿ ಪತ್ರದ ಮೂಲಕ ಗಮನಕ್ಕೆ ತರಲಾಗಿದೆ. ಬಡವರ ಸಮಸ್ಯೆಯನ್ನು ಮುಂದಿನ 1 ತಿಂಗಳಲ್ಲಿ ಪರಿಹರಿಸದಿದ್ದರೆ ಸರಕಾರಿ ಸಂಸ್ಥೆಗಳು, ಇಲಾಖೆಗಳು ಒತ್ತುವರಿ ಮಾಡಿರುವ ಭೂಮಿಯಲ್ಲಿ ಮನೆ ನಿರ್ಮಿಸಲು ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಭೆೇಟಿ ನೀಡಿದ ಶಾಸಕ ಬಿ.ಬಿ.ನಿಂಗಯ್ಯ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ತಮ್ಮ ಅವಧಿಯಲ್ಲಿ ತಾಲೂಕಿನಲ್ಲಿ 1,500 ನಿವೇಶನ ಮತ್ತು 3,500 ಮನೆಗಳನ್ನು ನೀಡಲಾಗಿದೆ. ವಸತಿ ಸಮಸ್ಯೆ ಪರಿಹಾರಕ್ಕೆ 9 ಸಭೆ ನಡೆಸಲಾಗಿದೆ. ಬಿ.ಹೊಸಳ್ಳಿ ಗ್ರಾಮಕ್ಕೆ 58 ಎಕರೆ ಭೂಮಿಯನ್ನು ನಿವೇಶನಕ್ಕೆ ಸೇರಿದಂತೆ 140 ಎಕರೆ ಭೂಮಿಯನ್ನು ಕೇಳಲಾಗಿದೆ. 29 ಗ್ರಾಪಂಗಳ ವಸತಿ ರಹಿತರ ಅನುಕೂಲಕ್ಕಾಗಿ 948 ಎಕರೆ, ಶಾಲೆಗಳಿಗೆ 277.20 ಎಕರೆ ಭೂಮಿ ಸೇರಿದಂತೆ ಒಟ್ಟು 2,319 ಎಕರೆ ಭೂಮಿಯ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ತಹಶೀಲ್ದಾರ್ ನಾಗೇಶ್ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ಧರಣಿಯಲ್ಲಿ ಹೋರಾಟ ಸಮಿತಿಯ ಕಾರ್ಯದರ್ಶಿ ಶಿವಪ್ಪ, ಮುಖಂಡರಾದ ರುಕ್ಮಿಣಿ, ಲಕ್ಷ್ಮೀ, ಬಬಿತಾ, ಮಂಜುನಾಥ್, ಗೋಪಿ, ನಾಗಮ್ಮ, ಬೇಬಿ, ವೀಣಾ, ಸರೋಜಾ, ಮಂಜುಳಾ, ಶೇಖರ್, ಸಂತೋಷ್, ವಿಠಲ, ಕೆಂಚಪ್ಪ, ಶಂಕರ್, ಗೋಪಾಲ್ ಮತ್ತಿತರರಿದ್ದರು.







