ಪೌರ ಕಾರ್ಮಿಕರ ಬದುಕು ಸ್ವಚ್ಛಗೊಳಿಸಬೇಕಿದೆ: ಪರಮೇಶ್
ಪೌರ ಕಾರ್ಮಿಕರ ದಿನಾಚರಣೆ

ತರೀಕೆರೆ, ಅ.20: ಪೌರ ಕಾರ್ಮಿಕರು ದುಶ್ಚಟಗಳಿಂದ ದೂರವಾಗಿ ಆರೋಗ್ಯ ಕಾಪಾಡಿಕೊಳ್ಳುವುದರ ಮೂಲಕ ಸಮಾಜದ ಆರೋಗ್ಯವನ್ನು ಕಾಪಾಡಬೇಕಿದೆ. ನಗರವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರ ಬದುಕನ್ನು ಸರಕಾರ ಹಾಗೂ ಸಂಘ ಸಂಸ್ಥೆಗಳು ಸ್ವಚ್ಛಗೊಳಿಸಬೇಕಿದೆ ಎಂದು ಜನವಿಕಾಸ ಪರಿಷತ್ ಅಧ್ಯಕ್ಷ ದೋರನಾಳು ಪರಮೇಶ್ ಹೇಳಿದ್ದಾರೆ.
ಪಟ್ಟಣದಲ್ಲಿ ಗುರುವಾರ ಜನವಿಕಾಸ ಪರಿಷತ್ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ 60ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಉಚಿತ ವಸ್ತ್ರ ವಿತರಿಸಿ ಮಾತನಾಡಿದರು.
ಸರಕಾರಗಳು ಸ್ಥಳೀಯ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರೊಬ್ಬರನ್ನು ನಾಮಕರಣ ಸದಸ್ಯರನ್ನಾಗಿ ನೇಮಿಸುವುದರ ಮೂಲಕ ಅವರ ಸಮಸ್ಯೆಗಳನ್ನು ತಿಳಿಯುವಲ್ಲಿ ಹಾಗೂ ಬಗೆಹರಿಸುವಲ್ಲಿ ಸಹಕಾರಿಯಾಗಬೇಕು. ಪೌರ ಕಾರ್ಮಿಕರ ಬದುಕು ಹಸನುಗೊಳ್ಳಲು ಅವರ ಮಕ್ಕಳಿಗೆ ಶಿಕ್ಷಣ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸಬೇಕೆಂದರು.
ತಾಲೂಕು ಕಸಾಪ ಅಧ್ಯಕ್ಷ ದಾದಾಪೀರ್ ಮಾತನಾಡಿ, ದೇಶ, ಬೀದಿಯ ಕಸದಿಂದ ಮುಕ್ತವಾಗಿ ಸ್ವಚ್ಛಗೊಂಡರೆ ಸಾಲದು. ವ್ಯವಸ್ಥೆಯಲ್ಲಿನ ಅಸ್ಪಶ್ಯತೆ ಹಾಗೂ ಅಸಮಾನತೆಯನ್ನು ಗುಡಿಸಿ ಹಾಕಬೇಕು. ಕೆಲಸದ ಸಮಯದಲ್ಲಿ ಬದಲಾವಣೆ ತರಬೇಕು. ಈ ಮೂಲಕ ಕಾರ್ಮಿಕರಿಗೂ ಗೃಹ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಅವಕಾಶ ಕಲ್ಪಿಸಬೇಕೆಂದರು.
ಪೌರ ಕಾರ್ಮಿಕ ಬಸವರಾಜು ಮಾತನಾಡಿ, ಸಮಾಜವು ಕಾರ್ಮಿಕರನ್ನು ಗೌರವಿಸುವ ಕೆಲಸ ಮಾಡುತ್ತಿರುವುದು ಸ್ವಾಗಾತಾರ್ಹ. ಇಂತಹ ಕೆಲಸಗಳು ನಮ್ಮಲ್ಲಿ ಆತ್ಮಾಭಿಮಾನ ಉಂಟು ಮಾಡುತ್ತವೆ ಎಂದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಟಿ.ರಮೇಶ್, ದಸಂಸ ಮುಖಂಡ ಎಸ್.ಎನ್.ಸಿದ್ರಾಮಪ್ಪ, ಪರ್ತಕರ್ತ ಅನಂತನಾಡಿಗ್, ವಿ.ಶೇಖರ್, ವಿಜಯಕುಮಾರ್, ಜನ ವಿಕಾಸ ಪರಿಷತ್ ಕಾರ್ಯದರ್ಶಿ ಟಿ.ಎಸ್.ಮೋಹನ್ ಕುಮಾರ್, ಕಸಾಪದ ಮಧು ಸೂದನ್ ಕಕ್ರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.







