ಬೀದಿ ಬದಿ ವ್ಯಾಪಾರಿಗಳ ತೆರವು ಸರಿಯಲ್ಲ: ಕರವೇ

ಮೂಡಿಗೆರೆ, ಅ.20: ಬೀದಿ ಬದಿಯ ವ್ಯಾಪಾರಿಗಳನ್ನು ಪಟ್ಟಣ ಪಂಚಾಯತ್ ಅಧಿಕಾರಿಗಳು ತೆರವುಗೊಳಿಸಿದ ಕ್ರಮ ಸರಿಯಲ್ಲ. ಇದರಿಂದ ಅವರ ಕುಟುಂಬದ ಜೀವನ ನಿರ್ವಹಣೆ ಕಷ್ಟವಾಗಿದೆ. ಅವರಿಗೆ ವ್ಯಾಪಾರಕ್ಕೆ ಪರ್ಯಾಯ ಜಾಗ ಕೊಡಬೇಕು ಎಂದು ಕರವೇ ಅಧ್ಯಕ್ಷ ದಾರದಹಳ್ಳಿ ಪ್ರಸನ್ನಗೌಡ ಒತ್ತಾಯಿಸಿದರು.
ಅವರು ಪಪಂ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಬಹಳ ಕಾಲದಿಂದಲೂ ಬೀದಿ ಬದಿಯ ವ್ಯಾಪಾರಿಗಳು ಪಟ್ಟಣದ ರಸ್ತೆ ಬದಿಗಳಲ್ಲಿ ಸಣ್ಣಪುಟ್ಟ ವ್ಯಾಪಾರ ನಡೆಸಿಕೊಂಡು ತಮ್ಮ ಕುಟುಂಬಗಳ ನಿರ್ವಹಣೆ ಮಾಡಿಕೊಂಡು ಮುಂದುವರಿಯುತ್ತಿದಾರೆ. ಇದನ್ನು ಪಪಂ ಆಡಳಿತವು ಸ್ವಚ್ಛತೆ ಹೆಸರಿನಲ್ಲಿ ತೆರವುಗೊಳಿಸಿ ವ್ಯಾಪಾರಿಗಳ ಹೊಟ್ಟೆಗೆ ಕಲ್ಲು ಹಾಕಿದೆ. ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ರಸ್ತೆ ಬದಿ ವ್ಯಾಪಾರಿಗಳಿಗೆ ಅಲ್ಲಿಯೇ ವ್ಯಾಪಾರ ನಡೆಸಲು ಅನುಕೂಲ ಕಲ್ಪಿಸಬೇಕು. ಪಟ್ಟಣದ ರಸ್ತೆಗಳೆಲ್ಲವೂ ಕೆಟ್ಟು ಹೋಗಿದ್ದು ಯಾವ ರಸ್ತೆಯಲ್ಲೂ ಸಂಚಾರ ಮಾಡಲು ರಸ್ತೆ ಯೋಗ್ಯವಾಗಿಲ್ಲ. ಅವುಗಳನ್ನು ದುರಸ್ತಿ ಪಡಿಸಲು ಪಪಂ ಮುಂದಾಗಿಲ್ಲ. ಹಲವು ಸಮಸ್ಯೆಗಳನ್ನು ಪರಿಹರಿಸುವುದನ್ನು ಬಿಟ್ಟು ವ್ಯಾಪಾರಿಗಳಿಗೆ ತೊಂದರೆ ನೀಡುವುದು ಸರಿಯಲ್ಲ. ಹೀಗೆ ಮುಂದುವರಿದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಕಸಬಾ ಹೋಬಳಿ ಅಧ್ಯಕ್ಷ ವಿನೋದ್ ಕುಮಾರ್ ಮತ್ತಿತರರು ಹಾಜರಿದ್ದರು.







