ವಲಸಿಗರಿಗೆ ಸೌಕರ್ಯ ಕಲ್ಪಿಸಲು ಸಂಸ್ಥೆಗಳು ಮುಂದಾಗಲಿ: ಸಿ.ಜಿ. ಚಿನ್ನಸ್ವಾಮಿ
ಅಹವಾಲು ಸ್ವೀಕಾರ

ಚಿಕ್ಕಮಗಳೂರು, ಅ.20: ಗ್ರಾಮೀಣ ಭಾಗದ ಜನರು ಶಿಕ್ಷಣ, ಉದ್ಯೋಗ ಸೇರಿದಂತೆ ಮತ್ತಿತರ ಕಾರಣಗಳಿಂದ ನಗರ ಪ್ರದೇಶಗಳಿಗೆ ವಲಸೆ ಬರುತ್ತಿದ್ದು, ಇದರಿಂದಾಗಿ ನಗರ ಪ್ರದೇಶಗಳಲ್ಲಿ ಜನಸಾಂದ್ರತೆ ಹೆಚ್ಚಳವಾಗಿದೆ. ಇಲ್ಲಿಯ ಜನರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸ್ಥಳೀಯ ಸಂಸ್ಥೆಗಳು ಮುಂದಾಗಬೇಕೆಂದು ನಾಲ್ಕನೆ ಹಣಕಾಸು ಆಯೋಗದ ಅಧ್ಯಕ್ಷ ಸಿ.ಜಿ. ಚಿನ್ನಸ್ವಾಮಿ ತಿಳಿಸಿದರು.
ಅವರು ಗುರುವಾರ ನಗರದ ಜಿಪಂ ಅಬ್ದುಲ್ ನಝೀರ್‌ಸಾಬ್ ಸಭಾಂಗಣದಲ್ಲಿ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು. ಆಯೋಗವು ಸ್ಥಳೀಯ ಸಂಸ್ಥೆಗಳಿಗೆ ಕಳೆದ ಐದು ವರ್ಷಗಳಿಂದ ನೀಡಿರುವ ಅನುದಾನ ಸಮರ್ಪಕ ಅನುಷ್ಠಾನ ಹಾಗೂ ಹಾಲಿ ಇರುವ ಸಮಸ್ಯೆಗಳನ್ನರಿತು ಅವಶ್ಯವಿರುವ ಅನುದಾನದ ಬಗ್ಗೆ ಸರಕಾರಕ್ಕೆ ಶಿಫಾರಸು ಮಾಡಲು ಬಂದಿರುವುದಾಗಿ ತಿಳಿಸಿದರು. ಜನಪ್ರತಿನಿಧಿಗಳಿಂದ ಆಲಿಸಿದ ಅಹವಾಲುಗಳಲ್ಲಿ ರಾಜ್ಯದ ಪ್ರತಿಯೊಂದು ನಗರಸಭೆ,ಪಪಂ, ಪುರಸಭೆಗಳಲ್ಲಿ ಬೇರೆ ಬೇರೆಯ ಸಮಸ್ಯೆಗಳು ಕೇಳಿಬಂದಿದ್ದು, ಕುಡಿಯುವ ನೀರು ಸೇರಿದಂತೆ, ಘನತ್ಯಾಜ್ಯ ವೈಜ್ಞಾನಿಕ ವಿಲೇವಾರಿಯ ಅನುಷ್ಠಾನದ ಬಗ್ಗೆ ಸಮಸ್ಯೆಗಳು ಕಂಡುಬರುತ್ತಿವೆ ಎಂದು ನುಡಿದರು.
ಜಿಲ್ಲಾಧಿಕಾರಿ ಜಿ.ಸತ್ಯವತಿ ಮಾತನಾಡಿ, ಸರಕಾರದಿಂದ ನೀಡುವ ಅನುದಾನಗಳನ್ನು ಯಾವ ರೀತಿ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿಗೊಳಿಸಲು ಯಾವುದೇ ನಗರಸಭೆೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ಗಳಲ್ಲಿ ಮಾಸ್ಟರ್ ಪ್ಲಾನ್‌ಗಳು ಇಲ್ಲದೇ ಇರುವುದು ಕಂಡುಬರುತ್ತಿದೆ. ಇದರಿಂದಾಗಿ ಮುಂದಿನ ಭವಿಷ್ಯದಲ್ಲಿ ಏನೆಲ್ಲ ಸಮಸ್ಯೆಗಳು ಆಗುತ್ತವೆ ಅವುಗಳನ್ನು ಹೇಗೆ ನಿರ್ವಹಿಸಬೇಕೆಂದು ಕಷ್ಟಸಾಧ್ಯವಾಗುತ್ತದೆ ಎಂದರು. ಈ ಸಂದರ್ಭ ಆಯೋಗದ ಸದಸ್ಯ ಎಚ್.ಆರ್. ಅಮರ್‌ನಾಥ್, ಸಮಾಲೋಚಕ ವಾರಂಬಳ್ಳಿ, ಯೋಜನಾ ನಿರ್ದೇಶಕ ರುದ್ರಮುನಿ, ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್, ಉಪಾಧ್ಯಕ್ಷ ರವೀಂದ್ರ ಪ್ರಭು, ನಗರಸಭೆ, ಪಟ್ಟಣ ಪಂಚಾಯತ್ ಹಾಗೂ ಪುರಸಭೆಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.







