ಜೀವ ಸಂಕುಲ ಸಂರಕ್ಷಣೆ ಎಲ್ಲರ ಹೊಣೆ: ಚಿಣ್ಣಪ್ಪ ಕರೆ
ನಾಗರಹೊಳೆಯಲ್ಲಿ ಪ್ರಕೃತಿ ಶಿಬಿರ

ಮಡಿಕೇರಿ, ಅ.20: ಪಶ್ಚಿಮ ಘಟ್ಟವೆಂದರೆ ಕೇವಲ ಕಾಡಲ್ಲ. ಅದು ಜೀವ ಜಗತ್ತಿನ ಅತ್ಯಂತ ಸೂಕ್ಷ್ಮ ಕೊಂಡಿ. ಇಲ್ಲಿನ ಝರಿ, ಜಲಪಾತ, ಪ್ರಾಣಿ, ಪಕ್ಷಿ, ಕೀಟಗಳು ಮತ್ತು ಸಸ್ಯ ಸಂಪತ್ತಿಗೆ ಮನುಷ್ಯ ಯಾವುದೇ ಧಕ್ಕೆಯನ್ನುಂಟು ಮಾಡದೆ ಅವುಗಳನ್ನು ಸಂರಕ್ಷಿಸಿದರೆ ಮಾತ್ರ ಇಡೀ ಜೀವ ಸಂಕುಲವನ್ನು ಸಂರಕ್ಷಿಸಲು ಸಾಧ್ಯವಾಗುತ್ತದೆ ಎಂದು ರಾಜ್ಯ ವೈಲ್ಡ್‌ಲೈಫ್ ಫಸ್ಟ್‌ನ ಅಧ್ಯಕ್ಷ ಕೆ.ಎಂ.ಚಿಣ್ಣಪ್ಪ ಅಭಿಪ್ರಾಯಪಟ್ಟಿದ್ದಾರೆ.
ಅರಣ್ಯ ಇಲಾಖೆ ಮತ್ತು ಕರ್ನಾಟಕವೈಲ್ಡ್‌ಲೈಫ್ ಫಸ್ಟ್ ವತಿಯಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕೊಡಗು ಜಿಲ್ಲಾ ಸಮಿತಿ ಹಾಗೂ ಕೊಡಗು ಇಕೋ ಕ್ಲಬ್ ಇವುಗಳ ಸಂಯುಕ್ತಾಶ್ರಯದಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಇತ್ತೀಚೆಗೆ ಪರಿಸರಾಸ್ತಕರಿಗೆ ಏರ್ಪಡಿಸಿದ್ದ ಪ್ರಕೃತಿ ಶಿಬಿರ (ನೇಚರ್ ಕ್ಯಾಂಪ್) ದಲ್ಲಿ ನಾಗರಹೊಳೆ ಉದ್ಯಾನವನದ ಜೀವಿ ವೈವಿಧ್ಯ ಕುರಿತು ಅವರು ಮಾಹಿತಿ ನೀಡಿದರು. ಕಾಡನ್ನು ಸಂರಕ್ಷಿಸಿದರೆ ಜೀವಿಗಳ ಸಂರಕ್ಷಣೆಆಗುತ್ತದೆ. ಕಾಡ್ಗಿಚ್ಚಿನಿಂದ ಅರಣ್ಯ ರಕ್ಷಿಸಬೇಕು. ಕಾಡಿನಲ್ಲಿ ಯಾವುದೇ ಜೀವಿಯ ಆವಾಸಕ್ಕೆ ಧಕ್ಕೆಯನ್ನುಂಟು ಮಾಡಬಾರದು. ಹಾಗೇನಾದರೂಮಾಡಿದಲ್ಲಿ ಪರಿಸರದಲ್ಲಿ ಅಸಮತೋಲನ ವುಂಟಾಗಿ ಇಡೀ ಕಾಡೇ ನಾಶವಾಗುವ ಅಪಾಯವಿದೆ. ಈ ನಿಟ್ಟಿನಲ್ಲಿ ಪಶ್ಚಿಮ ಘಟ್ಟಗಳ ಪ್ರಕೃತಿಯನ್ನು ನಿರ್ಲಕ್ಷ್ಯ ಮಾಡದೇ ಅದರ ಸಂರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು. ವೈಲ್ಡ್‌ಲೈಫ್ ಫಸ್ಟ್‌ನ ಸಮಿತಿ ಸದಸ್ಯ ಕೆ.ಎನ್. ಬೋಸ್‌ಮಾದಪ್ಪ, ಶಿಬಿರದ ಸಂಚಾಲಕಡಿ.ಕೃಷ್ಣಚೈತನ್ಯ, ನ್ಯಾಚುರಲಿಸ್ಟ್ ಗೋಪಿ ಶಿಬಿರಾ ರ್ಥಿಗಳಿಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ಪರಿಸರ ಪ್ರೇಮಿಗಳಾದ ರಾಜೇಶ್, ಭಾಸ್ಕರ್, ಸುಧೀಂದ್ರ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆಯುಕ್ತ ಜಿಮ್ಮಿ ಸಿಕ್ವೆರಾ, ಪರಿಸರಾಸ್ತಕರು, ಶಿಕ್ಷಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಕೃತಿ ಶಿಬಿರದ ಮಹತ್ವದ ಕುರಿತು ಮಾತನಾಡಿದ ರಾಜ್ಯ ವಿಜ್ಞಾನ ಪರಿಷತ್ತಿನ ಪರಿಸರ ಜಾಗೃತಿ ಆಂದೋಲನದ ರಾಜ್ಯ ಸಂಚಾಲಕ ಹಾಗೂ ಸುಂಟಿಕೊಪ್ಪಸರಕಾರಿ ಪ್ರೌಢಶಾಲೆಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ನಾವೆಲ್ಲರೂ ಅರಣ್ಯ ಮತ್ತು ಜಲ ಸಂರಕ್ಷಣೆ ಬಗ್ಗೆ ಜಾಗೃತಿ ವಹಿಸದಿದ್ದಲ್ಲಿ ಭವಿಷ್ಯತ್ತಿನಲ್ಲಿ ತೀವ್ರ ತೊಂದರೆ ಎದುರಿಸುವ ಪರಿಸ್ಥಿತಿ ತಲೆದೋರುತ್ತದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಕಾಡಿನ ಸಂರಕ್ಷಣೆ ಕುರಿತು ಗುಂಪು ಚರ್ಚೆ ನಡೆಸಿದ ನಂತರ ಕೆ.ಎಂ. ಚಿಣ್ಣಪ್ಪ ಕಾಡು ಮತ್ತು ವನ್ಯಜೀವಿ ಸಂರಕ್ಷಣೆ ಕುರಿತು ಹಾಗೂ ನ್ಯಾಚುರಲಿಸ್ಟ್ ಗೋಪಿ ನಾಗರಹೊಳೆ ಹುಲಿ ಸಂರಕ್ಷಣೆ ಕುರಿತು ಸ್ಲೈಡ್ ಪ್ರದರ್ಶನದ ಮೂಲಕ ಮಾಹಿತಿ ನೀಡಿದರು.







