ತಿತಿಮತಿ ಪುನರ್ವಸತಿಗರ ನ್ಯಾಯಯಕ್ಕೆ ಹೋರಾಟ: ಪೂವಯ್ಯ

ಸಿದ್ದಾಪುರ, ಅ.20: ಕಳೆದ 38 ವರ್ಷಗಳ ಹಿಂದೆ ತಿತಿಮತಿಯ ದೇವಮಚ್ಚಿ ಅರಣ್ಯದಿಂದ ಪುನರ್ವಸತಿ ಯೋಜನೆ ಮೇರೆ 166 ಕುಟುಂಬಗಳನ್ನು ಸ್ಥಳಾಂತರಿಸಿ ಅವರಿಗೆ ಭರವಸೆಯಂತೆ ಮೂಲ ಸೌಲಭ್ಯ ಹಾಗೂ 5ಎಕರೆ ಜಾಗವನ್ನು ನೀಡದೆ ವಂಚಿಸಲಾಗಿದೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಆರೋಪಿಸಿದ್ದಾರೆ.
ಆರೋಪದ ಮೇರೆ ಜಾತ್ಯತೀತ ಜನತಾದಳದಿಂದ ಅರಣ್ಯ ಇಲಾಖೆ ವಿರುದ್ಧ ನಿರಂತರ ಹೋರಾಟ ಹಾಗೂ ನ್ಯಾಯ ದೇಗುಲಗಳ ಮೊರೆ ಹೋಗಿ ಉಚ್ಚ ನ್ಯಾಯಾಲಯದಲ್ಲಿಯೂ ಕಾನೂನು ಹೋರಾಟ ನಡೆಸಲಾಗುವುದು ಎಂದು ಚನ್ನಯ್ಯನಕೋಟೆ ವ್ಯಾಪ್ತಿಯ ಗೂಡ್ಲೂರು ಚನ್ನಂಗಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ,ಈಚೆಗೆ ಗೂಡ್ಲೂರಿನ ಹುಲಿ ದಾಳಿ ಸಂತ್ರಸ್ತನಿಗೆ ರೂ. 10,000 ಪರಿಹಾರ ನೀಡಿ ಅವರು ಮಾತನಾಡಿದರು.
ಇತ್ತೀಚೆಗೆ ಪಕ್ಷದಿಂದ ವೀರಾಜಪೇಟೆ ಅರಣ್ಯ ವಿಭಾಗ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿ, ಹುಲಿ ದಾಳಿ ಹಾಗೂ ಗೂಡ್ಲೂರು ಪುನರ್ವಸತಿ ಸಂತ್ರಸ್ತರ ಬೇಡಿಕೆ ಈಡೇರಿಸಲು ಮನವಿ ಸಲ್ಲಿಸಲಾಗಿದ್ದು, ಇದು ಸರಕಾರದ ಪರಿಶೀಲನೆಯಲ್ಲಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಸಂತ್ರಸ್ತರ ನ್ಯಾಯಯುತ ಬೇಡಿಕೆಗಾಗಿ ಗಡುವು ನೀಡಿ ಕಾನೂನಿನ ಜೊತೆಯಲ್ಲಿ ಹೋರಾಟ ನಡೆಸಲಾಗುವುದು ಎಂದರು.
ಪಕ್ಷದ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಆರ್. ಸುರೇಶ್ ಮಾತನಾಡಿ, ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಇನ್ನಷ್ಟು ಕುಟುಂಬಗಳು ಬೀದಿ ಪಾಲಾಗುವುದನ್ನು ಬಿಡುವುದಿಲ್ಲ. ಸರಕಾರ ಹಾಗೂ ಇಲಾಖೆ ವಿರುದ್ಧ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಸಂಘಟಿತವಾಗಿ ಹೋರಾಟ ನಡೆಸ ಲಾಗುವುದು. ಪಕ್ಷದ ಕಾರ್ಯಕರ್ತರು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಲಿದ್ದಾರೆ ಎಂದು ಹೇಳಿದರು.
ಪಕ್ಷದ ತಾಲೂಕು ಸಮಿತಿ ಅಧ್ಯಕ್ಷ ಮನೆಯಪಂಡ ಸಿ.ಬೆಳ್ಳಿಯಪ್ಪ ಮಾತನಾಡಿ, ವಿಧಾನಸಭೆ ಚುನಾವಣೆಗೆ ಇನ್ನೂ ಅಲ್ಪಾವಧಿ ಇರುವಾಗಲೇ ತಾಲೂಕಿನಾದ್ಯಂತ ಪಕ್ಷವನ್ನು ಸಂಘಟಿಸುವ ಕಾರ್ಯ ಆರಂಭವಾಗಿದೆ. ಅರಣ್ಯ ಇಲಾಖೆಯಿಂದ ಗೂಡ್ಲೂರು ಪುನರ್ವಸತಿ ಸಂತ್ರಸ್ತರಿಗೆ ಉಂಟಾಗಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಕಾರ್ಯಕರ್ತರ ಸಭೆಯಲ್ಲಿ ಗೂಡ್ಲೂರು, ಚನ್ನಂಗಿ, ಮೂಡಾಬೈಲು ಹಾಗೂ ಪಕ್ಷದ ಕಾರ್ಯಕರ್ತರ ಪ್ರಮುಖರನ್ನೊಳಗೊಂಡ ಹೋರಾಟ ಸಮಿತಿಯನ್ನು ರಚಿಸಲಾಯಿತು. ಗೂಡ್ಲೂರಿನ 166 ಪುನರ್ವಸತಿ ಕುಟುಂಬಗಳು, ಹುಲಿ ದಾಳಿಯಿಂದ ಹಸುವನ್ನು ಕಳೆದುಕೊಂಡ ಸಂತ್ರಸ್ತರಿಗೂ ನ್ಯಾಯ ದೊರಕಿಸುವವರೆಗೆ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಸಮಿತಿಯ ಹಿಂದುಳಿದ ವರ್ಗದ ಎಚ್.ಜಿ. ಗೋಪಾಲ್, ಪಿ.ವಿ. ರೆನ್ನಿ, ವಿ.ಸಿ. ದೇವರಾಜ್, ಎಂ.ಕೆ. ವಸಂತ್, ಜಿ.ವಿ. ಸೋಮಯ್ಯ, ಗಣಪತಿ, ರಾಮಕೃಷ್ಣ, ಶಾಂತಿ, ಕುರಂಜಿ ಶಾಂತಿ, ಕುಯ್ಯಮುಡಿ ಉತ್ತಯ್ಯ, ಮುಕ್ಕಾಟಿರ ರಘುನಂದ, ಎಡಕೇರಿ ಬಾಲಕೃಷ್ಣ, ಜೆ.ಕೆ. ಬಸಪ್ಪಅಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಜರಿದ್ದರು.







