ಕಂದಾಯ ಬಾಕಿ: ಅಂಗಡಿಗಳಿಗೆ ಮುತ್ತಿಗೆ ಹಾಕಿದ ಅಧಿಕಾರಿಗಳು
ಮಾಲಕರು, ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ

ಕಡೂರು, ಅ.20: ಪುರಸಭೆಯ ವ್ಯಾಪ್ತಿಗೆ ಸೇರುವ ಮನೆ, ಕಟ್ಟಡ, ಕಲ್ಯಾಣ ಮಂಟಪ, ಚಿತ್ರ ಮಂದಿರ ಸೇರಿದಂತೆ ನಿರೀಕ್ಷೆಗೂ ಮೀರಿ ಕಂದಾಯ ಬಾಕಿ ಉಳಿಸಿಕೊಂಡವರ ಲಾಡ್ಜ್, ಟಿಂಬರ್ ಡಿಪೋಗಳ ಮೇಲೆ ಅಧ್ಯಕ್ಷ ಮಾದಪ್ಪ, ಮುಖ್ಯಾಧಿಕಾರಿಗಳ ನೇತೃತ್ವದಲ್ಲಿ ಮುತ್ತಿಗೆ ಹಾಕಿದಾಗ ಮಾತಿನ ಚಕಮಕಿ ನಡೆದು ಪುರಸಭೆಯ ಕಸವನ್ನು ಅಂಗಡಿಗಳ ಮುಂದೆ ಸುರಿದ ಘಟನೆ ನಡೆದಿದೆ. ಕಂದಾಯ ಸುಸ್ತಿ ಬಾಕಿದಾರರು ಸುಮಾರು 11 ಲಕ್ಷದವರೆಗೂ ಬಾಕಿ ಕಟ್ಟದೆ ಪುರಸಭೆಯ ಸಿಬ್ಬಂದಿಗೆ ಅಲೆಸುತ್ತಿದ್ದರು. ಕಾನೂನು ರೀತಿ ನೋಟಿಸ್ ನೀಡಿದರು ಹಣ ಕಟ್ಟದಿದ್ದಾಗ ಪುರಸಭೆ ಅಧ್ಯಕ್ಷ ಮಾದಪ್ಪ,ಉಪಾಧ್ಯಕ್ಷ ರಾಜೇಶ್ ಕೆಲವು ಸದಸ್ಯರೊಂದಿಗೆ ಮುಖ್ಯಾಧಿಕಾರಿ ಮಂಜಪ್ಪ ತೆರಳಿ ಬಾಕಿ ಕೇಳಿದಾಗ ಕಟ್ಟಡಗಳ ಮಾಲಕರಿಗೂ ಪುರಸಭೆಯ ಸಿಬ್ಬಂದಿ ವರ್ಗದವರಿಗೂ ಮಾತಿನ ಚಕಮಕಿ ನಡೆದಿದ್ದರಿಂದ ಪುರಸಭೆಯವರು ಅಂಗಡಿಗಳ ಮುಂದೆ ಕಸವನ್ನು ಸುರಿದರು. ಇದನ್ನು ಖಂಡಿಸಿದ ಮಾಲಕರು ಒಂದೆರಡು ದಿನ ಕಾಲವಕಾಶ ನೀಡಿ ಎಂದರು ಮಾನವೀಯತೆ ಇಲ್ಲದೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಪುರಸಭೆಯ ಅಧ್ಯಕ್ಷ ಮಾದಪ್ಪಮಾತನಾಡಿ, ನಾವು ಇಲ್ಲಿ ಯಾವುದೇ ಜಾತಿ,ಪಕ್ಷ ಎಂಬ ಭೇದಭಾವವಿಲ್ಲದೆ ಕಂದಾಯ ಬಾಕಿ ಇರುವವರ ಪಟ್ಟಿ ಸಿದ್ಧಪಡಿಸಿಕೊಂಡು ವಸೂಲಿಗೆ ಬಂದಿದ್ದೇವೆ. ಕಾನೂನು ರೀತಿ ಕಂದಾಯ ಕಟ್ಟಬೇಕು ಇಲ್ಲವಾದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದೇವೆ. ಪುರಸಭೆಗೆ ಆದಾಯ ಬರುವುದೇ ಕಂದಾಯದಿಂದ ಎಂದರು. ಪಟ್ಟಣದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ನಳ್ಳಿಯ ಸಂಪರ್ಕಗಳಿದ್ದು, ಇವುಗಳಲ್ಲಿ ಕೇವಲ 3 ಸಾವಿರ ಮಾತ್ರ ಸಕ್ರಮವಾಗಿವೆ, ಉಳಿದ 7 ಸಾವಿರ ಅಕ್ರಮ ನಳ್ಳಿಗಳಾಗಿವೆ.ಅಕ್ರಮ ನಳ್ಳಿ ಹೊಂದಿರುವವರು ಒಂದು ವಾರದೊಳಗೆ 1,500 ರೂ.ವನ್ನು ಕಟ್ಟಿ ಸಕ್ರಮಗೊಳಿಸಿಕೊಳ್ಳಬೇಕು ಇಲ್ಲವಾದರೆ ನಳ್ಳಿಯ ಸಂಪರ್ಕವನ್ನು ಕಡಿತಗೊಳಿಸುವುದಾಗಿ ತಿಳಿಸಿದರು. ಪುರಸಭೆಗೆ ಸೇರಿದ 161 ವಾಣಿಜ್ಯ ಮಳಿಗೆಗಳು ಇದ್ದು, ಶೀಘ್ರವೇ ಮರು ಹರಾಜು ನಡೆಸಲಿದ್ದೇವೆ. ಪಟ್ಟಣದಲ್ಲಿ ನಿರಂತರ ನಿಯಮ ಬಾಹಿರವಾಗಿ ಕಟ್ಟಡಗಳ ಕಾಮಗಾರಿ ನಡೆಯುತ್ತಿದ್ದು, ಇವುಗಳನ್ನು ಗುರುತಿಸಿ ತೆರಿಗೆ ಕಟ್ಟದಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪಟ್ಟಣದ ನಾಗರಿಕರು ಸಹಕಾರ ನೀಡಿದರೆ ಪುರಸಭೆಯಿಂದ ಉತ್ತಮ ಸೌಲಭ್ಯ ಪಡೆಯಲು ಸಾಧ್ಯ ಎಂದರು. ಉಪಾಧ್ಯಕ್ಷ ರಾಜೇಶ್, ಮುಖ್ಯಾಧಿಕಾರಿ ಮಂಜಪ್ಪ, ಸಿಬ್ಬಂದಿ ವರ್ಗದವರು ಇದ್ದರು.





