ಮನೆಗಳ ತೆರವಿಗೆ ಮುಂದಾದ ರೆಲ್ವೆ
ಇಲಾಖೆ ಸ್ಥಳೀಯ ನಿವಾಸಿಗಳಿಂದ ಪ್ರತಿಭಟನೆ
ಶಿವಮೊಗ್ಗ, ಅ.20: ಮಹಾನಗರ ಪಾಲಿಕೆ 7 ನೆ ವಾರ್ಡ್ ವಿನೋಬಾನಗರ ಬಡಾವಣೆಯ ಹುಚ್ಚರಾಯಸ್ವಾಮಿ ಕಾಲನಿಯ ಸರ್ವೇ ನಂಬರ್ 41 ರಲ್ಲಿರುವ ಮನೆಗಳನ್ನು ರೈಲ್ವೆ ಇಲಾಖೆ ತೆರವುಗೊಳಿಸಲು ಮುಂದಾಗಿದ್ದು, ಯಾವುದೇ ಕಾರಣಕ್ಕೂ ತೆರವು ಕಾರ್ಯಾಚರಣೆಗೆ ಅವಕಾಶ ಕಲ್ಪಿಸಬಾರದೆಂದು ಆಗ್ರಹಿಸಿ ಗುರುವಾರ ಸ್ಥಳೀಯ ನಿವಾಸಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಕಳೆದ ಹಲವು ವರ್ಷಗಳಿಂದ ನೂರಾರು ಬಡ ನಾಗರಿಕರು, ವಿಶೇಷವಾಗಿ ಎಸ್ಸಿ ಮತ್ತು ಎಸ್ಟಿ ಜನಾಂಗದವರು ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿ ಮನೆಗಳನ್ನು ನಿರ್ಮಿಸಿ ಜೀವನ ನಡೆಸಿಕೊಂಡು ಬರುತ್ತಿದ್ದಾರೆ. ಬುಧವಾರ ರೈಲ್ವೆ ಇಲಾಖೆಯು ತನ್ನ ಜಾಗದಲ್ಲಿ ನಿರ್ಮಿಸಿರುವ ಮನೆಗಳನ್ನು ತೆರವುಗೊಳಿಸಲು ಮುಂದಾಗಿದ್ದು, ಎರಡು ಮನೆಗಳನ್ನು ನೆಲಸಮ ಕೂಡ ಮಾಡಿದೆ. ತೆರವು ಕಾರ್ಯಾಚರಣೆಗೆ ಸ್ಥಳೀಯ ನಿವಾಸಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅರ್ಧಕ್ಕೆ ತೆರವು ಕಾರ್ಯಾಚರಣೆಯನ್ನು ರೈಲ್ವೆ ಇಲಾಖೆ ಸ್ಥಗಿತಗೊಳಿಸಿದೆ. ಎರಡು ದಿನಗಳಲ್ಲಿ ಮನೆಗಳನ್ನು ತೆರವು ಗೊಳಿಸದಿದ್ದರೆ ಮತ್ತೆ ಕಾರ್ಯಾಚರಣೆ ನಡೆಸುವುದಾಗಿ ರೈಲ್ವೆ ಇಲಾಖೆಯು ಎಚ್ಚರಿಕೆ ನೀಡಿ ಹಿಂದಿರುಗಿದೆ. ಇದರಿಂದ ಬಡಾವಣೆಯ ನೂರಾರು ನಿವಾಸಿಗಳು ಬೀದಿ ಪಾಲಾಗುವ ಆತಂಕ ಎದುರಾಗಿದ್ದು, ಭಯದ ಭೀತಿಯಲ್ಲಿಯೇ ನಿವಾಸಿಗಳು ಜೀವನ ಸಾಗಿಸುವಂತಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಸುಮಾರು ಎರಡು ವರ್ಷಗಳ ಹಿಂದೆ ರೈಲ್ವೆ ಇಲಾಖೆಯು ತೆರವು ಕಾರ್ಯಾಚರಣೆ ನಡೆಸಲು ಮುಂದಾದಾಗ ಅಂದಿನ ಜಿಲ್ಲಾಧಿಕಾರಿ ವಿಫುಲ್ ಬನ್ಸಾಲ್‌ರವರು ನಿವಾಸಿಗಳಿಗೆ ಪುನರ್ವಸತಿ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು. ತದನಂತರ ತೆರವು ಕಾರ್ಯಾಚರಣೆ ನಡೆಸುವಂತೆ ರೈಲ್ವೆ ಇಲಾಖೆಗೆ ನಿರ್ದೇಶನ ನೀಡಿದ್ದರು. ಆದರೆ ಇಲ್ಲಿಯವರೆಗೂ ಜಿಲ್ಲಾಡಳಿತ ನಿವಾಸಿಗಳಿಗೆ ಪುನರ್ವಸತಿ ವ್ಯವಸ್ಥೆ ಕಲ್ಪಿಸಿಲ್ಲ. ಆದರೆ ಈ ನಡುವೆಯೇ ಏಕಾಏಕಿ ರೈಲ್ವೆ ಇಲಾಖೆಯು ಮನೆಗಳ ತೆರವು ಕಾರ್ಯಾಚರಣೆಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕೂಡಲೇ ಮಧ್ಯಪ್ರವೇಶಿಸಬೇಕು. ರೈಲ್ವೆ ಇಲಾಖೆಯ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಬೇಕು. ನಿವಾಸಿಗಳಿಗೆ ಸೂಕ್ತ ಪುನರ್ವಸತಿ ಸೌಲಭ್ಯ ಕಲ್ಪಿಸುವವರೆಗೂ ಕಾರ್ಯಾಚರಣೆ ನಡೆಸದಂತೆ ಸೂಚನೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.





