ಸ್ಫೋಟಕದಿಂದ ಹಸು ಮೃತ್ಯು: ಆರೋಪಿಯ ಬಂಧನ
ಬಂಟ್ವಾಳ, ಅ.20: ಚೆಲ್ಲಂಗಾರು ಗುಡ್ಡ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆಗೆಂದು ಸ್ಫೋಟಕವಿಟ್ಟು ದನವೊಂದರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ವಿಟ್ಲ ಪೊಲೀಸರು ಕರೋಪಾಡಿಯಲ್ಲಿ ಬಂಧಿಸಿದ್ದಾರೆ.
ಕರೋಪಾಡಿ ಗ್ರಾಮದ ಚೆಲ್ಲಂಗಾರು ನಿವಾಸಿ ಗೋವಿಂದ ನಾಯ್ಕ(63) ಬಂಧಿತ ಆರೋಪಿ. ಗುಡ್ಡದಲ್ಲಿ ಕಾಡು ಪ್ರಾಣಿಯನ್ನು ಕೊಲ್ಲುವ ಉದ್ದೇಶದಿಂದ ಸ್ಫೋಟಕವಿಟ್ಟು ಹಸುವನ್ನು ಹತ್ಯೆ ಮಾಡಿರುವುದರಲ್ಲಿ ಈ ಆರೋಪಿಯ ಪಾತ್ರ ಇದೆ ಎಂಬ ದೂರಿನ ಹಿನ್ನಲೆಯಲ್ಲಿ ಆತನನ್ನು ಬಂಧಿಸಲಾಗಿದೆ.
ಚೆಲ್ಲಂಗಾರು ಗುಡ್ಡದಲ್ಲಿ ಮಂಗಳವಾರ ರಾಧಾಕೃಷ್ಣ ಮೂಲ್ಯಗೆ ಸೇರಿದ 4 ವರ್ಷ ಹಸು ಕಾಡುಪ್ರಾಣಿ ಹತ್ಯೆಗಿಟ್ಟ ಸ್ಫೋಟಕ ಸಿಡಿದು ಮುಖ ಛಿದ್ರವಾಗಿ ಅಸುನೀಗಿತ್ತು. ದನದ ಸಾವಿನಿಂದ 20 ಸಾವಿರ ರೂ. ನಷ್ಟ ಸಂಭವಿಸಿರುವ ಬಗ್ಗೆ ವಿಟ್ಲ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಾಗಿತ್ತು.
ಪ್ರಾಣಿ ಹತ್ಯೆ ಯತ್ನ ಪ್ರಕರಣವೇ ಇಲ್ಲ:
ಸ್ಥಳಕ್ಕೆ ಸರಿಯಾದ ಸಮಯಕ್ಕೆ ಬಾರದ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಆದೇಶದ ಮೇರೆಗೆ ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಪ್ರಕರಣದಲ್ಲಿ ಪ್ರಾಣಿ ಹತ್ಯೆಗೆ ಯತ್ನಿಸಿದ ಬಗ್ಗೆ ಯಾವುದೇ ಕಾಯ್ದೆಯ ಪ್ರಕಾರಣ ದಾಖಲಿಸಿಕೊಂಡಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ.





