ಜೆಎನ್‌ಯು ವಿದ್ಯಾರ್ಥಿಯ ಪತ್ತೆಗೆ ವಿಶೇಷ ತಂಡ ರಚನೆಗೆ ಗೃಹ ಸಚಿವರ ಸೂಚನೆ
ಹೊಸದಿಲ್ಲಿ, ಅ.20: ನಾಪತ್ತೆಯಾಗಿರುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬನನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಗೃಹ ಸಚಿವ ರಾಜನಾಥ್ ಸಿಂಗ್ ದಿಲ್ಲಿ ಪೊಲೀಸ್ ಕಮಿಷನರ್‌ಗೆ ಸೂಚಿಸಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ವಿವಿ ಆವರಣದಲ್ಲಿ ಕಿತ್ತಾಟ ನಡೆದಿತ್ತು. ಇದರ ಮರು ದಿನದಿಂದ ನಜೀಬ್ ಅಹ್ಮದ್ ಎಂಬ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ. ಈತನನ್ನು ಪತ್ತೆಹಚ್ಚುವಲ್ಲಿ ವಿವಿ ಅಧಿಕಾರಿಗಳು ನಿರ್ಲಕ್ಷ ಧೋರಣೆ ತಳೆದಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿ ಗಳ ಗುಂಪೊಂದು ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಬುಧವಾರ ಮಧ್ಯಾಹ್ನದಿಂದ ಉಪ ಕುಲಾಧಿಪತಿ ಎಂ.ಜಗದೀಶ್ ಕುಮಾರ್ ಮತ್ತು ಸುಮಾರು 12 ಮಂದಿ ಅಧಿಕಾರಿಗಳನ್ನು ವಿವಿಯ ಆಡಳಿತ ಕಚೇರಿಯಲ್ಲಿ ನಿರ್ಬಂಧದಲ್ಲಿರಿಸಿದ್ದಾರೆ. ಜಗದೀಶ್ ಕುಮಾರ್ ಈ ಆರೋಪವನ್ನು ನಿರಾಕರಿಸಿದ್ದು ವಿದ್ಯಾರ್ಥಿ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಪತ್ರ ಬರೆದು ತಿಳಿಸಲಾಗಿದೆ. ವಿವಿ ಕೂಡಾ ತನಿಖೆ ನಡೆಸಿ ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಲು ಕ್ರಮ ಕೈಗೊಳ್ಳಲಿದೆ. ವಿವಿ ಆಡಳಿತ ವರ್ಗದ ಪ್ರಾಮಾಣಿಕ ಪ್ರಯತ್ನದ ಬಗ್ಗೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿ ಕೊಡಲಾಗಿದೆ. ಆದರೂ ಅವರು ಪ್ರತಿಭಟನೆ ಮುಂದುವರಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.





