20 ಗಂಟೆಗಳ ದಿಗ್ಬಂಧನದಿಂದ ಕೊನೆಗೂ ಮುಕ್ತಗೊಂಡ ಜೆಎನ್‌ಯು ಕುಲಪತಿ
ವಿದ್ಯಾರ್ಥಿ ನಾಪತ್ತೆ ಪ್ರಕರಣ
ಹೊಸದಿಲ್ಲಿ,ಅ.20: ನಾಪತ್ತೆಯಾಗಿರುವ ಬಯೋ-ಟೆಕ್ನಾಲಜಿ ವಿಭಾಗದ ವಿದ್ಯಾರ್ಥಿ ನಜೀಬ್ ಜಂಗ್ ಪತ್ತೆಗಾಗಿ ಹೆಚ್ಚಿನ ಪ್ರಯತ್ನಗಳಿಗೆ ಆಗ್ರಹಿಸಿ 20 ಗಂಟೆಗೂ ಹೆಚ್ಚು ಅವಧಿಗೆ ಪ್ರತಿಭಟನಾನಿರತ ವಿದ್ಯಾರ್ಥಿಗಳ ದಿಗ್ಬಂಧನದಲ್ಲಿದ್ದ ಇಲ್ಲಿಯ ಜವಾಹರಲಾಲ್ ನೆಹರು ವಿವಿ(ಜೆಎನ್‌ಯು)ಯ ಕುಲಪತಿ ಎಂ.ಜಗದೀಶ ಕುಮಾರ್ ಮತ್ತು ಇತರ ಕೆಲವು ಅಧಿಕಾರಿಗಳು ಇಂದು ಬಿಡುಗಡೆಗೊಂಡಿದ್ದಾರೆ.
ನಮ್ಮನ್ನು ಅಕ್ರಮವಾಗಿ ದಿಗ್ಬಂಧನದಲ್ಲಿರಿಸಿದ್ದು ವಿಷಾದನೀಯ ಎಂದು ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಕುಮಾರ್ ಹೇಳಿದರು.
ಜಂಗ್‌ನನ್ನು ಪತ್ತೆ ಹಚ್ಚಲು ಎಲ್ಲ ಪ್ರಯತ್ನಗಳನ್ನೂ ನಾವು ಮಾಡುತ್ತಿದ್ದೇವೆ. ಆತ ವಿವಿಗೆ ಮರಳುತ್ತಾನೆಂಬ ವಿಶ್ವಾಸ ನಮಗಿದೆ ಎಂದರು.
ಮೂಲತಃ ಉತ್ತರ ಪ್ರದೇಶದ ಬದಾಯುನ್ ನಿವಾಸಿಯಾಗಿರುವ ನಜೀಬ್ ಜಂಗ್ ವಿವಿಯ ಹಾಸ್ಟೆಲ್‌ನಲ್ಲಿ ವಾಸವಿದ್ದು, ಶುಕ್ರವಾರ ರಾತ್ರಿ ಎಬಿವಿಪಿ ಕಾರ್ಯಕರ್ತರು ಆತನೊಂದಿಗೆ ಜಗಳವಾಡಿ ಥಳಿಸಿದಾಗಿನಿಂದ ನಾಪತ್ತೆಯಾಗಿದ್ದಾನೆ ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘ(ಎಐಎಸ್‌ಐ)ವು ಆರೋಪಿಸಿದೆ.
ಬುಧವಾರ ಮಧ್ಯಾಹ್ನ ಸೂಕ್ತ ಕ್ರಮ ಮತ್ತು ಕುಲಪತಿಗಳಿಂದ ಭರವಸೆಗೆ ಆಗ್ರಹಿಸಿ ನೂರಾರು ವಿದ್ಯಾರ್ಥಿಗಳು ಅವರ ಕಚೇರಿಗೆ ಮುತ್ತಿಗೆ ಹಾಕಿದ್ದು,ರಾತ್ರಿಯಿಡೀ ಮುತ್ತಿಗೆ ಮುಂದುವರಿದಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಹಾಯಕ ಗೃಹಸಚಿವ ಕರಣ್ ರಿಜಿಜು ಅವರು, ಅಧಿಕಾರಿಗಳನ್ನು ಈ ರೀತಿ ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳುವುದು ಸರಿಯಲ್ಲ. ಕೆಲವು ವಿದ್ಯಾರ್ಥಿಗಳು ಓದುವದಕ್ಕಲ್ಲ,ರಾಜಕೀಯ ಮಾಡಲೆಂದೇ ಜೆಎನ್‌ಯುದಲ್ಲಿ ಇರುವಂತಿದೆ ಎಂದರು.
ಕುಮಾರ ಅವರು ದಿಗ್ಬಂಧನವನ್ನು ಹಿಂದೆಗೆದುಕೊಳ್ಳುವಂತೆ ಮತ್ತು ಚರ್ಚೆಗೆ ಬರುವಂತೆ ಕೋರಿ ಬುಧವಾರ ರಾತ್ರಿಯಿಡೀ ವಿದ್ಯಾರ್ಥಿಗಳಿಗೆ ಸರಣಿ ಟ್ವೀಟ್‌ಗಳನ್ನು ರವಾನಿಸಿದ್ದರು. ಪ್ರತಿಭಟನೆಗಳಿಂದಾಗಿ ಕಳೆದ ಮೂರು ದಿನಗಳಿಂದಲೂ ವಿವಿಯಲ್ಲಿ ತರಗತಿಗಳು ವ್ಯತ್ಯಯಗೊಂಡಿವೆ.





