ಚುನಾವಣೆ ಜಾತ್ಯತೀತ ಪ್ರಕ್ರಿಯೆ, ಅದನ್ನು ಧರ್ಮದಿಂದ ಬೇರ್ಪಡಿಸಬೇಕು: ಸುಪ್ರೀಂ
ಹೊಸದಿಲ್ಲಿ,ಅ20: ಅಭ್ಯರ್ಥಿ, ಪಕ್ಷ ಅಥವಾ ಬೆಂಬಲಿಗರು ಧರ್ಮದ ಹೆಸರಿನಲ್ಲಿ ಮತಗಳನ್ನು ಯಾಚಿಸುವುದು ಕಾನೂನುಬಾಹಿರವೇ ಎನ್ನುವುದನ್ನು ಸರ್ವೋಚ್ಚ ನ್ಯಾಯಾಲಯವೇ ನಿರ್ಧರಿಸುವುದು ಹೊರತು ಕಾನೂನುಗಳನ್ನು ರೂಪಿಸುವಲ್ಲಿ ಬಹಳಷ್ಟು ವಿಳಂಬ ಮಾಡುವ ಸಂಸತ್ ಅಲ್ಲ ಎಂದು ಭಾರತದ ಶ್ರೇಷ್ಠ ನ್ಯಾಯಾಧೀಶ ಟಿ.ಎಸ್.ಠಾಕೂರ್ ಅವರು ಗುರುವಾರ ಸ್ಪಷ್ಟಪಡಿಸಿದರು. ಚುನಾವಣೆ ಜಾತ್ಯತೀತ ಪ್ರಕ್ರಿಯೆಯಾಗಿದೆ ಮತ್ತು ಧರ್ಮವನ್ನು ರಾಜಕೀಯದಿಂದ ಪ್ರತ್ಯೇಕಗೊಳಿಸಬೇಕಾಗಿದೆ ಎಂದು ನ್ಯಾಯಾಲಯವು ಹೇಳಿತು.
ಹಿಂದುತ್ವ ಜೀವನ ವಿಧಾನವಾಗಿದೆ ಮತ್ತು ಅದರ ಹೆಸರಿನಲ್ಲಿ ಮತಗಳನ್ನು ಯಾಚಿಸುವುದು ಕಾನೂನುಬಾಹಿರವಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು 1995ರಲ್ಲಿ ನೀಡಿದ್ದ ತೀರ್ಪನ್ನು ಪುನರ್‌ಪರಿಶೀಲಿಸುತ್ತಿರುವ ಸಪ್ತ ನ್ಯಾಯಾಧೀಶರ ಪೀಠವು ವಿಚಾರಣೆ ಸಂದರ್ಭ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಕಳೆದ 20 ವರ್ಷಗಳಿಂದಲೂ ಹಿಂದುತ್ವ ಕುರಿತ ಈ ವಿವಾದ ಬಾಕಿಯುಳಿದಿದೆ. ಈ ಎಲ್ಲ ವರ್ಷಗಳಲ್ಲಿ ಸಂಸತ್ತು ಏನನ್ನೂ ಮಾಡಿಲ್ಲ. ಲೈಂಗಿಕ ಕಿರುಕುಳ ಕುರಿತು ಅವರು(ಸಂಸತ್) ವರ್ಷಗಳ ಕಾಲ ಏನನ್ನೂ ಮಾಡಿರಲಿಲ್ಲ ಎಂದು ನ್ಯಾಯಾಲಯದ ಆದೇಶದ 16 ವರ್ಷಗಳ ಬಳಿಕ 2013, ಡಿಸೆಂಬರ್‌ನಲ್ಲಿ ಜಾರಿಯಾದ ವಿಶಾಖಾ ಮಾರ್ಗಸೂಚಿಗಳನ್ನು ಪ್ರಸ್ತಾಪಿಸಿ ನ್ಯಾಯಾಲಯವು ಹೇಳಿತು.
ಚುನಾವಣಾ ಪ್ರಚಾರದ ವೇಳೆ ರಾಮಮಂದಿರ ನಿರ್ಮಾಣದಂತಹ ವಿಷಯ ಗಳನ್ನೆತ್ತುವುದು ಕಾನೂನುಬಾಹಿರವಾಗಬಹುದೇ ಎಂಬ ಶಂಕೆಯನ್ನೂ ಅದು ವ್ಯಕ್ತಪಡಿಸಿತು. ಅಭ್ಯರ್ಥಿಗಳು ಮತಯಾಚನೆಗಾಗಿ ಧರ್ಮವನ್ನು ಬಳಸುವುದನ್ನು ನಿಷೇಧಿಸಿರುವ ಜನತಾ ಪ್ರಾತಿನಿಧ್ಯ ಕಾಯ್ದೆಯ ಕಲಂ 123(3) ಅನ್ನು ನ್ಯಾಯಾಲಯವು ಪರಿಶೀಲಿಸುತ್ತಿದೆ.





