ಉಗ್ರರ ನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದ ಬಿಎಸ್‌ಎಫ್
ಜಮ್ಮು,ಅ.20: ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಆರು ಉಗ್ರರ ಗುಂಪೊಂದು ಭಾರತದ ಗಡಿಯೊಳಗೆ ನುಸುಳಲು ನಡೆಸಿದ್ದ ಯತ್ನವನ್ನು ಬಿಎಸ್‌ಎಫ್ ವಿಫಲಗೊಳಿಸಿದೆ.
ನಿನ್ನೆ ತಡರಾತ್ರಿ 11:45ರ ಸುಮಾರಿಗೆ ಕಥುವಾದ ಬೊಬಿಯಾ ಮುಂಚೂಣಿ ಪ್ರದೇಶದಲ್ಲಿ ಗಡಿಯೊಳಗೆ ನುಸುಳಲು ಯತ್ನಿಸಿದ್ದ ಉಗ್ರರ ಗುಂಪು ಗಸ್ತುನಿರತ ಬಿಎಸ್‌ಎಫ್ ವಾಹನದ ಮೇಲೆ ಗುಂಡಿನ ಮತ್ತು ರಾಕೆಟ್ ಚಾಲಿತ ಗ್ರೆನೇಡ್ ದಾಳಿ ನಡೆಸಿತ್ತು. ಬಿಎಸ್‌ಎಫ್ ಯೋಧರು ಪ್ರತಿದಾಳಿ ನಡೆಸಿದ್ದು ಗುಂಡಿನ ಕಾಳಗ ಸುಮಾರು 20 ನಿಮಿಷಗಳ ಕಾಲ ಮುಂದುವರಿದಿತ್ತು. ಉಗ್ರರನ್ನು ಬೆಂಬಲಿಸಲು ಪಾಕಿಸ್ತಾನದ ಗಡಿ ಹೊರಠಾಣೆಗಳಿಂದಲೂ ಗುಂಡಿನ ದಾಳಿ ನಡೆದಿರುವ ಸಾಧ್ಯತೆಯಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಪ್ರದೇಶದಲ್ಲಿ ಬೆಳಕು ಮೂಡಿಸಲು ಬಿಎಸ್‌ಎಫ್ ಯೋಧರು ಪ್ಯಾರಾ ಬಾಂಬ್‌ಗಳನ್ನು ಸ್ಫೋಟಿಸಿದಾಗ ಉಗ್ರರು ಗಾಯಾಳುವೋರ್ವನನ್ನು ಹೊತ್ತೊಯ್ಯುತ್ತಿರುವುದು ಕಂಡು ಬಂದಿತ್ತು. ಉಗ್ರರಲ್ಲಿ ಸಾವುಗಳು ಸಂಭವಿಸಿರುವ ಸಾಧ್ಯತೆಯಿದ್ದು, ನಮ್ಮ ಕಡೆ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಧಿಕಾರಿ ತಿಳಿಸಿದರು.





