ರಾಷ್ಟ್ರಾದ್ಯಂತ ‘ಎ ದಿಲ್ ಹೈ ಮುಷ್ಕಿಲ್’ ಚಿತ್ರದ ಸುರಕ್ಷಿತ ಬಿಡುಗಡೆಗೆ ರಾಜನಾಥ್ ಭರವಸೆ
ಹೊಸದಿಲ್ಲಿ,ಅ.20: ಕರಣ್ ಜೋಹರ್ ಅವರ ‘ಎ ದಿಲ್ ಹೈ ಮುಷ್ಕಿಲ್’ ಚಿತ್ರದ ಬಿಡುಗಡೆಗೆ ತಡೆ ಯೊಡ್ಡುವ ಬೆದರಿಕೆಗಳ ನಡುವೆಯೇ ಇಂದು ಗೃಹ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಬಾಲಿವುಡ್‌ನ ಹಿರಿಯ ನಿರ್ದೇಶಕರು ರಾಷ್ಟ್ರಾದ್ಯಂತ ಚಿತ್ರದ ಸುರಕ್ಷಿತ ಬಿಡುಗಡೆಗೆ ಸಹಕರಿಸುವಂತೆ ಆಗ್ರಹಿಸಿದರು.
ಯಾವುದೇ ರಾಜ್ಯದಲ್ಲಿ ಹಿಂಸಾಚಾರ ನಡೆಯು ವುದಕ್ಕೆ ಅವಕಾಶ ನೀಡುವುದಿಲ್ಲ. ಚಿತ್ರವನ್ನು ಪ್ರದರ್ಶಿಸುವ ಎಲ್ಲ ಚಿತ್ರಮಂದಿರಗಳಿಗೆ ಶೇ.100ರಷ್ಟು ಪೊಲೀಸ್ ರಕ್ಷಣೆಯನ್ನು ಒದಗಿಸಲಾಗುವುದು. ಈ ಬಗ್ಗೆ ತಾನು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತ ನಾಡುವುದಾಗಿ ಸಿಂಗ್ ಭರವಸೆ ನೀಡಿದ್ದಾರೆ ಎಂದು ನಿರ್ಮಾಪಕರ ನಿಯೋಗದ ನೇತೃತ್ವ ವಹಿಸಿದ್ದ ಮುಕೇಶ್ ಭಟ್ ತಿಳಿಸಿದರು.
ಕರಣ್ ಈ ವಾರದ ಆದಿಯಲ್ಲಿ ವೀಡಿಯೊ ಹೇಳಿಕೆ ಯೊಂದನ್ನು ನೀಡಿ, ತನಗೆ ಎಲ್ಲಕ್ಕಿಂತಲೂ ದೇಶವೇ ಮುಖ್ಯವಾಗಿದೆ ಎಂದು ಘೋಷಿಸಿದ್ದರಲ್ಲದೆ, ತನ್ನ ಮುಂದಿನ ಚಿತ್ರಗಳಲ್ಲಿ ತಾನು ಪಾಕಿಸ್ತಾನಿ ಕಲಾವಿದರನ್ನು ಬಳಸುವುದಿಲ್ಲ ಎಂದು ಭರವಸೆ ನೀಡಿದ್ದರು.
ಆದರೆ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಉದ್ವಿಗ್ನತೆ ಸೃಷ್ಟಿಯಾಗುವ ಎಷ್ಟೋ ಮೊದಲೇ ತನ್ನ ಚಿತ್ರದ ಚಿತ್ರೀಕರಣ ನಡೆದಿತ್ತು. ಈಗ ಚಿತ್ರವನ್ನು ಬಹಿಷ್ಕರಿಸುವ ಅಥವಾ ಅದನ್ನು ಕಪ್ಪುಪಟ್ಟಿಗೆ ಸೇರಿಸುವ ಯಾವುದೇ ಪ್ರಯತ್ನಗಳು ಈ ಚಿತ್ರಕ್ಕಾಗಿ ಕೆಲಸ ಮಾಡಿರುವ 300ಕ್ಕೂ ಅಧಿಕ ಜನರ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ ಎಂದು ಅವರು ಹೇಳಿದ್ದರು.
ಪಾಕಿಸ್ತಾನಿ ನಟ ಫವಾದ್ ಖಾನ್ ಅವರು ಸರಕಾರದ ಅಧಿಕೃತ ಅನುಮತಿ ಪಡೆದುಕೊಂಡೇ ಜೋಹರ್ ಅವರ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಬಿಡುಗಡೆಗೆ ಅವಕಾಶ ನೀಡಲೇಬೇಕು. ಆದರೆ ಪಾಕ್ ನಟನನ್ನು ಬಳಸಿಕೊಂಡಿದ್ದಕ್ಕೆ ಚಿತ್ರವನ್ನು ಬಹಿಷ್ಕರಿಸಬೇಕೇ ಎನ್ನುವುದನ್ನು ವೀಕ್ಷಕರೇ ನಿರ್ಧರಿಸಬೇಕು ಎಂದು ಆಡಳಿತ ಬಿಜೆಪಿಯ ಪ್ರತಿನಿಧಿಗಳು ಹೇಳಿದ್ದಾರೆ.
ಮುಂಬೈನಲ್ಲಿ ‘ಎ ದಿಲ್ ಹೈ ಮುಷ್ಕಿಲ್’ ಚಿತ್ರವನ್ನು ಪ್ರದರ್ಶಿಸುವ ಸಿನೆಮಾ ಮಂದಿರಗಳ ಮೇಲೆ ದಾಳಿ ನಡೆಸುವುದಾಗಿ ರಾಜ್ ಠಾಕ್ರೆಯವರ ಎಂಎನ್‌ಎಸ್ ಬೆದರಿಕೆಯೊಡ್ಡಿದೆ. ನಾಲು ರಾಜ್ಯಗಳ ಸಿನೆಮಾ ಮಂದಿರಗಳ ಮಾಲಕರ ಕೂಟವೊಂದು ಈ ಚಿತ್ರವನ್ನು ತಾವು ಪ್ರದರ್ಶಿಸುವುದಿಲ್ಲ ಎಂದು ಹೇಳಿದ್ದಾರೆ.
ಖಾನ್ ಈ ಹಿಂದೆ ‘ಕಪೂರ್ ಆ್ಯಂಡ್ ಸನ್ಸ್’ ನಂತಹ ಚಿತ್ರಗಳಲ್ಲಿಯೂ ಅಭಿನಯಿಸಿದ್ದರು.





