ಶಿವಕಾಸಿ ಪಟಾಕಿ ದುರಂತ: ಒಂಬತ್ತು ಸಾವು
ಶಿವಕಾಸಿ, ಅ.20: ತಮಿಳುನಾಡಿನ ಶಿವಕಾಸಿಯ ವಿರುಧನಗರ ಜಿಲ್ಲೆಯಲ್ಲಿ ಸಂಭವಿಸಿದ ಪಟಾಕಿ ದುರಂತವೊಂದರಲ್ಲಿ 6 ಮಹಿಳೆಯರು ಸೇರಿದಂತೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.
ವಾಹನವೊಂದರಿಂದ ಅಂಗಡಿಗೆ ಪಟಾಕಿಗಳನ್ನು ಸಾಗಿಸುವಾಗ ಬೆಂಕಿ ಹತ್ತಿಕೊಂಡಿದೆ. ಪಟಾಕಿಗಳ ಪ್ಯಾಕ್‌ಗಳನ್ನು ಅಸಮರ್ಪಕವಾಗಿ ಸಾಗಿಸಿರುವುದು ಬೆಂಕಿ ಹತ್ತಲು ಕಾರಣ ಇರಬೇಕು ಎಂದು ಅಂದಾಜಿಸಲಾಗಿದೆ.
ಬೆಂಕಿಯಿಂದ ಝೆರಾಕ್ಸ್ ಅಂಗಡಿಯೊಂದಕ್ಕೆ ಹಾನಿಯಾಗಿದ್ದು ಪರಿಸರದಲ್ಲಿ ನಿಲ್ಲಿಸಲಾಗಿದ್ದ ಹಲವಾರು ವಾಹನಗಳು ಹಾನಿಗೀ ಡಾಗಿವೆ. 6 ಮಂದಿ ಮಹಿಳೆಯರು ಸೇರಿದಂತೆ ಒಂಬತ್ತು ಮಂದಿ ಸಾವನ್ನಪ್ಪಿದ್ದು ಇವರೆಲ್ಲ ವಿಪರೀತ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವಿರುಧನಗರ ಜಿಲ್ಲಾಧಿಕಾರಿ ಎ.ಶಿವಜ್ಞಾನಂ ತಿಳಿಸಿದ್ದಾರೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ಹತೋಟಿಗೆ ತಂದರು. ಒಟ್ಟು 22 ಮಂದಿ ಬಾಧೆಗೊಳಗಾಗಿದ್ದು ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೊಂದು ದುರದೃಷ್ಟಕರ ಘಟನೆ ಎಂದಿರುವ ಜಿಲ್ಲಾಧಿಕಾರಿ, ಈ ರೀತಿಯ ಘಟನೆ ಮರುಕಳಿಸದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಶಿವಕಾಸಿ ಪಟಾಕಿ ಕಾರ್ಖಾನೆಗಳ ಕೇಂದ್ರ ಎನಿಸಿದ್ದು ದೀಪಾವಳಿಯ ಸಂದರ್ಭ ಇಲ್ಲಿ ತಯಾರಾದ ಪಟಾಕಿಗಳು ದೇಶದೆಲ್ಲೆಡೆಗೆ ರವಾನೆಯಾಗುತ್ತವೆ.





