‘ಮಹಾದಾಯಿ’ ಬಿಜೆಪಿ ಮುಖಂಡರ ರಾಜಕೀಯ ಸಲ್ಲ ಶಾಸಕ ಕೋನರೆಡ್ಡಿ ಆಕ್ಷೇಪ
ಬೆಂಗಳೂರು, ಅ. 20: ಮಹಾದಾಯಿ ವಿವಾದ ಇತ್ಯರ್ಥಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಸೇರಿ ಬಿಜೆಪಿ ಮುಖಂಡರು ಆಸಕ್ತಿ ವಹಿಸಬೇಕು. ಈ ವಿಷಯದಲ್ಲಿ ಯಾರೊಬ್ಬರೂ ರಾಜಕೀಯ ಮಾಡಬಾರದು ಎಂದು ಜೆಡಿಎಸ್ ಶಾಸಕ ಎನ್.ಎಚ್.ಕೋನರೆಡ್ಡಿ ಆಗ್ರಹಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಗಳ ಜತೆ ಮಾತನಾಡಿದ ಅವರು, ಅ.21ರಂದು ಮುಂಬೈನಲ್ಲಿ ನಡೆಯಬೇಕಿದ್ದ ಮೂರು ರಾಜ್ಯಗಳ ಸಿಎಂ ಸಭೆ ದಿಢೀರ್ ರದ್ದುಗೊಂಡಿರುವುದು ಉತ್ತರ ಕರ್ನಾಟಕ ಭಾಗದ ಎಲ್ಲ ಜನರಿಗೆ ಆಘಾತ ತಂದಿದ್ದು, ಬಹಳ ನೋವಾಗಿದೆ ಎಂದರು. ಾವೇರಿ ನದಿ ವಿವಾದ ಇತ್ಯರ್ಥ್ಯ ವಹಿಸಿದ ಆಸಕ್ತಿಯನ್ನು ಬಿಜೆಪಿ ಮುಖಂಡರು ಮಹಾದಾಯಿ ವಿವಾದ ಪರಿಹಾರಕ್ಕೆ ಯತ್ನಿಸಬೇಕು. ಮಹಾರಾಷ್ಟ್ರ ಸಿಎಂ ಮನವೊಲಿಕೆ ಮಾದರಿಯಲ್ಲೇ ಗೋವಾ ಸಿಎಂ ಮನವೊಲಿಸಲು ಮುಂದಾಗಬೇಕಿತ್ತು. ಆದರೆ, ಅದನ್ನು ಬಿಟ್ಟು ಬಿಜೆಪಿ ಮುಖಂಡರು ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ದಿನ ನಿಗದಿಗೆ ಆಗ್ರಹ: ಮಹಾದಾಯಿ ವಿವಾದದ ಬಗ್ಗೆ ಚರ್ಚೆಗೆ ಬೆಳಗಾವಿ ಅವೇಶನದಲ್ಲಿ ದಿನ ನಿಗದಿಪಡಿಸಬೇಕೆಂದ ಅವರು, ಉತ್ತರಕರ್ನಾಟಕದಲ್ಲಿ ಮತ್ತೆ ಹೋರಾಟ ನಡೆಸಬೇಕಾಗುತ್ತದೆ. ಬೆಳಗಾವಿ, ಗದಗ, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಯ ಎಲ್ಲ 13 ತಾಲೂಕುಗಳಲ್ಲಿ ಪ್ರವಾಸ ಮಾಡಿ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲಾಗುವುದು ಎಂದರು.
ಹುಬ್ಬಳ್ಳಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು. ಅಲ್ಲದೆ, ತಾಲೂಕಿನಲ್ಲಿ ರೈತರು ಬೆಳೆದ ಈರುಳ್ಳಿ, ಹತ್ತಿ, ಶೇಂಗಾ, ಮೆಣಸಿನಕಾಯಿ ಹಾಗೂ ಹೆಸರು ಬೆಳೆಗಳು ಸಮರ್ಪಕ ಮಳೆಯಿಲ್ಲದೆ ಹಾನಿಗೀಡಾಗಿವೆ. ಹೀಗಾಗಿ ಎಲ್ಲ ರೈತರಿಗೆ ಸೂಕ್ತ ಪರಿಹಾರ ಧನ ನೀಡಬೇಕು ಎಂದು ಆಗ್ರಹಿಸಿದರು.







